ಚಳ್ಳಕೆರೆ ಪರಿಸರದಲ್ಲಿ ಕಪಿಲೆ ವಾರ್ಗಿಕ ರಚನೆಯಾಗಿರುವ ಸ್ಥಳನಾಮಗಳ ಸ್ವರೂಪ


ಸಂಜೆವಾಣಿ ವಾರ್ತೆ
ಹೊಸಪೇಟೆ ಮೇ13: ‘ಕಪಿಲೆ ಎಂಬ ರೂಪ ಬಳಕೆಯಾಗುವಾಗ ಕೊಪಲೆ, ಕೊಪ್ಲೆ, ಕಪ್ಲೆ, ಕೊಪ್ಳೆ ಎಂದು ಬಳಕೆಯಾಗುತ್ತವೆ’ ಎಂದು ಸಂಶೋಧನಾರ್ಥಿ ವಿಶ್ವನಾಥ ಟಿ. ಅವರು ಹೇಳಿದರು.
ಕನ್ನಡ ವಿಶ್ವವಿದ್ಯಾಲಯದ ಕನ್ನಡ ಭಾಷಾಧ್ಯಯನ ವಿಭಾಗ ಇತ್ತೀಜೆಗೆ ಹಮ್ಮಿಕೊಂಡಿದ್ದ 249 ಮುಂದುವರಿದ ಭಾಗ 3ನೇ ಆನ್‍ಲೈನ್ ವಾರದಮಾತು ಕಾರ್ಯಕ್ರಮದಲ್ಲಿ “ಚಳ್ಳಕೆರೆ ಪರಿಸರದಲ್ಲಿ ಕಪಿಲೆ ವಾರ್ಗಿಕದಿಂದ ರಚನೆಯಾಗಿರುವ ಸ್ಥಳನಾಮಗಳ ಸ್ವರೂಪ” ಎಂಬ ವಿಷಯದ ಕುರಿತು ಅವರು ಮಾತನಾಡುತ್ತಿದ್ದರು. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪರಿಸರದ ಸುತ್ತಮುತ್ತ ಪ್ರದೇಶದಲ್ಲಿ ಕಪಿಲೆ ವಾರ್ಗಿಕದಿಂದ ರಚನೆಯಾಗಿರುವಂತಹ ಸ್ಥಳನಾಮಗಳು ಬಹಳಷ್ಟು ಕಂಡು ಬರುತ್ತವೆ. ವಾಸ್ತವವಾಗಿ ಕಪಿಲೆ ಎಂದರೆ ‘ಹಿಂದೆ ಏತ ನೀರಾವರಿ ಪದ್ಧತಿ ಇದ್ದಂತಹ ಪ್ರದೇಶ. ಆದರೆ ಪ್ರಸ್ತುತ ನೀರಾವರಿ ಪ್ರದೇಶ ಹಾಗೂ ಜನರು ವಾಸಮಾಡುವ ಸ್ಥಳ’ ಎಂಬ ಅರ್ಥಗಳು ಬಳಕೆಯಲ್ಲಿವೆ ಎಂದರು. ಕಪಿಲೆ ಎಂಬ ರೂಪವನ್ನು ಸ್ಥಳನಾಮಗಳಾಗಿ ವ್ಯಕ್ತಿನಾಮ, ಗ್ರಾಮನಾಮ, ವ್ಯಕ್ತಿ ಮತ್ತು ಜಾತಿ ಸೂಚಕ, ನಿಸರ್ಗ ಸೂಚಕ, ಜನವಸತಿ ಮತ್ತು ಇತರೆ ಸ್ಥಳನಾಮಗಳೆಂದು ವರ್ಗೀಕರಿಸಿಕೊಂಡು ಅಧ್ಯಯನ ಮಾಡಬಹುದು ಎಂದು ಉದಾಹರಣೆ ಸಹಿತ ವಿವರಿಸಿದರು.
ಕನ್ನಡ ಭಾಷಾಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ. ಪಿ ಮಹದೇವಯ್ಯ, ಸಂಶೋಧನಾರ್ಥಿ ದಿನೇಶ್ ಅವರು ಪ್ರತಿಕ್ರಿಯೆ ನೀಡಿದರು. ಕಾರ್ಯಕ್ರಮದ ಸಂಚಾಲಕ ಚೌಡಪ್ಪ ಪಿ, ಚೆಂದಸ್ವಾಮಿ ಪಾಲ್ಗೊಂಡಿದ್ದರು. ವಿಭಾಗದ ಆಂತರಿಕ ಮತ್ತು ಬಾಹ್ಯ ಸಂಶೋಧನಾರ್ಥಿಗಳು, ಇತರ ವಿಭಾಗದ ಸಂಶೋಧನಾರ್ಥಿಗಳು ಅಂತರ್ಜಾಲ ವೇದಿಕೆಯಲ್ಲಿ ಭಾಗವಹಿಸಿದ್ದರು.