ಚಳಿಯಲ್ಲೂ ಮಳೆ ನಿರೀಕ್ಷೆ

ಹೊಸದಿಲ್ಲಿ,ಡಿ.೨೭-ದೇಶದಲ್ಲಿ ಚಳಿ ಶುರುವಾಗಿದ್ದರೂ ಮಳೆ ಇನ್ನೂ ನಿಂತಂತೆ ಕಾಣುತ್ತಿಲ್ಲ. ಉತ್ತರ ಮತ್ತು ಈಶಾನ್ಯದಲ್ಲಿ ಕೊರೆಯುವ ಚಳಿಯ ನಡುವೆಯೂ ದಕ್ಷಿಣ ಮತ್ತು ಪೂರ್ವದಲ್ಲಿ ಮಳೆಯ ಎಚ್ಚರಿಕೆ ನೀಡಲಾಗಿದೆ.
ಡಿಸೆಂಬರ್ ೩೦ ರಿಂದ ಜನವರಿ ೨ ರವರೆಗೆ ಮಧ್ಯ ಭಾರತದ ವಾಯುವ್ಯ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಎನ್‌ಸಿಆರ್‌ನಲ್ಲಿ ಇಂದು (ಬುಧವಾರ) ಬೆಳಗ್ಗೆ ದಟ್ಟ ಮಂಜು ಆವರಿಸಿದೆ. ಇದು ಇತರ ನಗರಗಳ ಮೇಲೂ ಪರಿಣಾಮ ಬೀರಿದೆ. ಹೀಗಾಗಿ, ಬುಧವಾರ ದೆಹಲಿ-ಎನ್‌ಸಿಆರ್‌ನಲ್ಲಿ ಹಳದಿ ಎಚ್ಚರಿಕೆ ನೀಡಲಾಗಿದೆ.
ಇದಲ್ಲದೆ, ಹೊಸ ವರ್ಷದ ಆರಂಭದಲ್ಲಿ ಹವಾಮಾನದಲ್ಲಿ ವೈಪರೀತ್ಯ ಉಂಟಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.
ಸ್ಕೈಮೆಟ್ ಹವಾಮಾನ ವರದಿ ಪ್ರಕಾರ, ತಮಿಳುನಾಡು, ಕೇರಳ ಮತ್ತು ಲಕ್ಷದ್ವೀಪದ ಕೆಲವು ಭಾಗಗಳಲ್ಲಿ ಇಂದು ಲಘು ಮಳೆಯಾಗುವ ಸಾಧ್ಯತೆಯಿದೆ.
ಡಿಸೆಂಬರ್ ೨೯ ರ ರಾತ್ರಿಯಿಂದ ಪಶ್ಚಿಮ ಹಿಮಾಲಯದಲ್ಲಿ ಮಳೆ ಮತ್ತು ಹಿಮಪಾತ ಪ್ರಾರಂಭವಾಗಬಹುದು. ಗಂಗಾ ಬಯಲು ಪ್ರದೇಶದಲ್ಲಿ ಮಂಜು ತುಂಬಾ ದಟ್ಟವಾಗಿರುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಸ್ಕೈಮೆಟ್ ಹವಾಮಾನ ವರದಿಯ ಪ್ರಕಾರ, ಡಿಸೆಂಬರ್ ೩೧ ರವರೆಗೆ ಪಂಜಾಬ್‌ನ ಹಲವು ಭಾಗಗಳಲ್ಲಿ ದಟ್ಟವಾದ ಮಂಜಿನ ಪರಿಸ್ಥಿತಿಗಳು ಮುಂದುವರಿಯುವ ನಿರೀಕ್ಷೆಯಿದೆ.
ಹರಿಯಾಣ, ಚಂಡೀಗಢ, ದೆಹಲಿ ಮತ್ತು ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಡಿಸೆಂಬರ್ ೨೯ ರವರೆಗೆ ಸಾಧಾರಣದಿಂದ ದಟ್ಟವಾದ ಮಂಜು ಬೀಳುವ ಎಚ್ಚರಿಕೆ ನೀಡಲಾಗಿದೆ.
ಉತ್ತರ ರಾಜಸ್ಥಾನ ಮತ್ತು ಉತ್ತರ ಮಧ್ಯಪ್ರದೇಶದ ವಿವಿಧ ಭಾಗಗಳಲ್ಲಿ ದಟ್ಟವಾದ ಮತ್ತು ಲಘುವಾದ ಮಂಜು ಉಂಟಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.