ಚಳಿಗೆ ನಡುಗಿದ ದೆಹಲಿ

ನವದೆಹಲಿ,ಜ.೧- ರಾಜಧಾನಿ ನವದೆಹಲಿಯಲ್ಲಿ ನೂತನ ವರ್ಷದ ಮೊದಲ ದಿನವೇ ಮೈ ಕೊರೆಯುವ ಚಳಿ ಕಾಣಿಸಿಕೊಂಡಿದ್ದು, ಇಂದು ತಾಪಮಾನ ೧.೧ ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದು ೧೫ ವರ್ಷಗಳ ಅವಧಿಯಲ್ಲಿ ಅತ್ಯಂತ ಕನಿಷ್ಠ ತಾಪಮಾನ ಇದಾಗಿದೆ.
ಭಾರಿ ಮಂಜು ಆವರಿಸಿದ್ದರಿಂದ ವಾಹನ ಸವಾರರು ಪರದಾಡಬೇಕಾಯಿತು. ೨೦೦೬ರ ಜ. ೮ ರಂದು ದೆಹಲಿಯಲ್ಲಿ ೦.೨ ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಇದುವರೆಗಿನ ಅತಿ ಕನಿಷ್ಠ ತಾಪಮಾನ ೦.೬ ಇಗ್ರಿ ಸೆಲ್ಸಿಯಸ್, ೧೯೩೫ರ ಜನವರಿಯಲ್ಲಿ ದಾಖಲಾಗಿತ್ತು.
ಕಳೆದ ವರ್ಷ ೨.೪ ಡಿಗ್ರಿ ಸೆಲ್ಸಿಯಸ್ ಅತಿ ಕಡಿಮೆ ತಾಪಮಾನ ವರದಿಯಾಗಿತ್ತು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಇಂದು ಬೆಳಿಗ್ಗೆ ೬ ಗಂಟೆ ಸಮಯದಲ್ಲಿ ಸಬ್ದರ್‌ಜಂಗ್ ಮತ್ತು ಪಾಲಂನಲ್ಲಿ ದಟ್ಟವಾದ ಮಂಜು ಮುಸುಕಿದ ವಾತಾವರಣ ನಿರ್ಮಾಣವಾಗಿತ್ತು. ಇದು ಶೂನ್ಯದಿಂದ ೫೦ ಮೀ. ಗೋಚರತೆ ಇತ್ತು ಎಂದು ಹವಾಮಾನ ಇಲಾಖೆಯ ಪ್ರಾದೇಶಿಕ ಮುನ್ಸೂಚನೆ ಕೇಂದ್ರದ ಮುಖ್ಯಸ್ಥ ಕುಲದೀಪ್ ಶ್ರೀವಾತ್ಸವ ವಿವರಿಸಿದ್ದಾರೆ.
ಜ. ೨ ರಿಂದ ೬ರ ಅವದಿಯಲ್ಲಿ ತಾಪಮಾನ ಇನ್ನು ಹೆಚ್ಚಳವಾಗುವ ಸಾಧ್ಯತೆ ಇದೆ. ಜ. ೪ ರಿಂದ ೫ರ ವೇಳೆಗೆ ಕನಿಷ್ಠ ತಾಪಮಾನ ೮ ಡಿಗ್ರಿ ಸೆಲ್ಸಿಯಸ್‌ಗೆ ತಲುಪಬಹುದು ಎಂದು ಅವರು ಹೇಳಿದ್ದಾರೆ. ಜ. ೩-೫ರ ನಡುವೆ ತುಂತುರು ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.