ಚಳಿಗಾಲದಲ್ಲೂ ಮಳೆ ನಿರೀಕ್ಷೆ

ನವದೆಹಲಿ, ನ.೨೯- ದೇಶಾದ್ಯಂತ ಮತ್ತೆ ವಾತಾವರಣ ಬದಲಾಗಿದೆ.ಚಳಿಗಾಲದಲ್ಲೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಉತ್ತರದ ರಾಜ್ಯಗಳಲ್ಲಿ ಹಿಮಪಾತ ಆರಂಭವಾಗಿದ್ದರೆ, ದಕ್ಷಿಣ ಭಾರತದ ಬಹುತೇಕ ರಾಜ್ಯಗಳಲ್ಲಿ ಮಳೆ ಆರಂಭವಾಗಿದೆ. ದೆಹಲಿ-ಎನ್‌ಸಿಆರ್‌ನಲ್ಲಿ ತುಂತುರು ಮಳೆಯಾಗುವ ಸಾಧ್ಯತೆಯಿದೆ. ಗುಜರಾತ್, ಹರಿಯಾಣ ಮತ್ತು ರಾಜಸ್ಥಾನದಲ್ಲಿ ಮಳೆ ತುಂತುರು ಇರಲಿದೆ.
ಇದು ಪಶ್ಚಿಮ ಘಟ್ಟಗಳಿಂದ ಮಧ್ಯ ಭಾರತದ ಮೂಲಕ ಚಲಿಸುವಾಗ, ಈ ಪ್ರದೇಶದಲ್ಲಿ ಮೋಡ ಕವಿದ ವಾತಾವರಣವಿರಲಿದೆ. ಕೆಲವೆಡೆ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ಛತ್ತೀಸ್‌ಗಢ, ದಕ್ಷಿಣ ಮಧ್ಯಪ್ರದೇಶ, ವಿದರ್ಭ, ಮಹಾರಾಷ್ಟ್ರ, ತೆಲಂಗಾಣ, ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ದೆಹಲಿ, ಉತ್ತರ ಪ್ರದೇಶ, ಕೇರಳ, ಕರ್ನಾಟಕ ಮತ್ತು ಪಶ್ಚಿಮ ಹಿಮಾಲಯದಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ಪಶ್ಚಿಮ ಹಿಮಾಲಯದ ಮೇಲಿನ ಪ್ರದೇಶಗಳಲ್ಲಿ ಲಘು ಹಿಮಪಾತವು ಸಂಭವಿಸಬಹುದು.
ಪಶ್ಚಿಮ ಮೋಡಗಳು ಹಿಮಾಲಯದ ಪಶ್ಚಿಮ ಭಾಗವನ್ನು ತಲುಪಿವೆ. ಇನ್ನು ಮೂರ್ನಾಲ್ಕು ದಿನಗಳ ಕಾಲ ಮೋಡಗಳ ಚಲನೆ ಇರುತ್ತದೆ.
ಹಿಮಾಲಯದ ಅತಿ ಎತ್ತರದ ಪ್ರದೇಶಗಳಲ್ಲಿ ಹಿಮಪಾತವಾಗುತ್ತದೆ. ತಗ್ಗು ಪ್ರದೇಶದಲ್ಲಿ ಮುಂದಿನ ಮೂರು ದಿನ ಮಳೆಯಾಗಲಿದೆ ಎಂದು ವರದಿಯಾಗಿದೆ.
ಶ್ರೀನಗರ, ಪಾಣಿಪತ್, ಪಹಲ್ಗಾಮ್, ಗುಲ್ಮಾರ್ಗ್, ಮನಾಲಿ, ಕುಲು, ಧರ್ಮಶಾಲಾ, ಡಾಲ್ಹೌಸಿ ಮತ್ತು ಶಿಮ್ಲಾದಲ್ಲಿ ಮಳೆ ಮತ್ತು ಹಿಮಪಾತವಾಗುವ ಸಾಧ್ಯತೆಯಿದೆ.