ಚಳಿಗಾಲದಲ್ಲಿ ಸೋಂಕು ಹೆಚ್ಚಳದ ಸಾಧ್ಯತೆ -ಡಿಸಿ

ಕೋಲಾರ,ಅ.೨೭:ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣದಲ್ಲಿದೆ ಎಂದು ಮೈಮರೆಯುವಂತಿಲ್ಲ, ಚಳಿಗಾಲದಲ್ಲಿ ಸೋಂಕು ಹೆಚ್ಚಳದ ಎಚ್ಚರಿಕೆಯನ್ನು ತಜ್ಞರು ನೀಡಿರುವುದರಿಂದ ಜನತೆ ಹೆಚ್ಚಿನ ಮುಂಜಾಗ್ರತೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅಭಿಪ್ರಾಯಪಟ್ಟರು.
ಶನಿವಾರ ಜಿಲ್ಲಾಡಳಿತ ಭವನದಲ್ಲಿ ಹಮ್ಮಿಕೊಂಡಿದ್ದ ಆಯುಧಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತಾಯಿ ದುರ್ಗಾ ಮಾತೆ ಕೋವಿಡ್ ಮಾಹಾ ಮಾರಿಯನ್ನು ಈ ದೇಶದಿಂದ ಬೇಗ ತೊಲಗುವಂತೆ ಮಾಡಲಿ ಎಂದು ಪ್ರಾರ್ಥಿಸಿದರು.
ಜಿಲ್ಲೆಯಲ್ಲಿ ಗುಣಮುಖರಾಗುತ್ತಿರುವವರ ಪ್ರಮಾಣ ಹೆಚ್ಚಳವಾಗಿದೆ ಜತೆಗೆ ಸಾವಿನ ಪ್ರಮಾಣವೂ ಕಡಿಮೆಯಾಗಿದ್ದು, ಸೋಂಕನ್ನು ತಡೆಗಟ್ಟಲು ಜನತೆ ಸಾಮಾಜಿಕ ಅಂತರ ಪಾಲನೆ ಮತ್ತು ಮಾಸ್ಕ್ ಬಳಕೆಯನ್ನು ಕಡ್ಡಾಯವಾಗಿ ಮಾಡಬೇಕು ಎಂದು ಮನವಿ ಮಾಡಿದರು.
ಸೋಂಕಿನ ಪಾಸಿಟೀವ್ ಪ್ರಮಾಣ ಶೇ.೩ರಷ್ಟಿದೆ, ಜಿಲ್ಲೆಯಲ್ಲಿ ಕೊರೋನಾ ಮೊದಲ ಪ್ರಕರಣ ಕಂಡು ಬಂದಿದ್ದು ೪೮ ದಿನಗಳ ನಂತರವೇ, ಸರ್ಕಾರಿ ಅಧಿಕಾರಿಗಳು, ನೌಕರರ ಪರಿಶ್ರಮವನ್ನು ಮರೆಯುವಂತಿಲ್ಲ ಎಂದರು.
ಕೋವಿಡ್ ನೋಡಲ್ ಅಧಿಕಾರಿಗಳಾಗಿ ಅನೇಕರು ಕೆಲಸ ಮಾಡಿದ್ದಾರೆ, ಈ ನಡುವೆ ಅನೇಕ ನೌಕರರು ಸಿಬ್ಬಂದಿ ಸೋಂಕಿಗೆ ತುತ್ತಾಗಿದ್ದಾರೆ, ಆದರೂ ಅನೇಕರು ಸೋಂಕನ್ನು ಗೆದ್ದು ಬಂದು ಕರ್ತವ್ಯದಲ್ಲಿ ನಿರತರಾಗಿದ್ದಾರೆ ಎಂದು ತಿಳಿಸಿದರು.ಕೋವಿಡ್ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಆರೋಗ್ಯ ಇಲಾಖೆ ಜತೆಗೆ ಅನೇಕ ಸಂಘ ಸಂಸ್ಥೆಗಳು ಶ್ರಮಿಸಿವೆ, ಜತೆಗೆ ನ್ಯಾಯಾಧೀಶರು, ಕಾನೂನು ಸೇವಾ ಪ್ರಾಧಿಕಾರವೂ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದೆ ಎಂದು ಧನ್ಯವಾದ ಸಲ್ಲಿಸಿದರು.
ತಾವು ಜಿಲ್ಲಾಧಿಕಾರಿಗಳಾಗಿ ಇಲ್ಲಿ ಬಂದು ಅಧಿಕಾರ ವಹಿಸಿಕೊಂಡ ತಕ್ಷಣವೇ ಕೊರೋನಾ ಸವಾಲು ಎದುರಾಯಿತು. ಅದು ಜಿಲ್ಲೆಗೆ ಪ್ರವೇಶಿಸದಂತೆ ಹೆಚ್ಚಿನ ಮುಂಜಾಗ್ರತೆ ವಹಿಸಿದ್ದೆವು ಆದರೂ ಮಾರಿ ವಕ್ಕರಿಸಿದ್ದು, ಇದೀಗ ನಿಯಂತ್ರಣದಲ್ಲಿದೆ ಎಂಬುದು ಸಂತಸ ವಿಷಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಕೋವಿಡ್ ಕುರಿತ ಜಾಗೃತಿ ವಹಿಸಿದ್ದಕ್ಕಾಗಿ ಹಾಗೂ ನವರಾತ್ರಿ ಅಂಗವಾಗಿ ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ರಘುನಾಥ್, ಕಾನೂನು ಸೇವೆಗಳ ಪ್ರಾಧಿಕಾರಿದ ಸದಸ್ಯ ಕಾರ್ಯದರ್ಶಿ ಗಂಗಾಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಜಿಲ್ಲಾ ಪಂಚಾಯತ್ ಸಿ.ಇ.ಓ. ರವಿಕುಮಾರ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜುರನ್ನು ಸನ್ಮಾನಿಸಲಾಯಿತು.
ಕೋವಿಡ್ ನಿಯಂತ್ರಣದ ಉಸ್ತುವಾರಿ ವಹಿಸಿ, ನೌಕರರು, ಅಧಿಕಾರಿಗಳಿಗೆ ಪ್ರೇರಣೆಯಾಗಿದ್ದಕ್ಕಾಗಿ ಜಿಲ್ಲಾಧಿಕಾರಿಗಳು ಹಾಗೂ ವಿಭಾಗಾಧಿಕಾರಿಗಳನ್ನು ಜಿಲ್ಲಾ ಸರ್ಕಾರಿ ನೌಕರರ ಸಂಘದ ವತಿಯಿಂದ ಸಂಘದ ರಾಜ್ಯ ಕಾರ್ಯದರ್ಶಿ ಸುರೇಶ್ ಬಾಬು, ಜಿಲ್ಲಾ ಖಜಾಂಚಿ ವಿಜಯ್, ನಿಕಟಪೂರ್ವ ಪದಾಧಿಕಾರಿಗಳಾದ ರವಿಚಂದ್ರ, ಎಸ್.ಚೌಡಪ್ಪ ಮತ್ತಿತರರು ಸನ್ಮಾನಿಸಿದರು.
ಎಸ್ಪಿ, ಕಾರ್ತಿಕ್ ರೆಡ್ಡಿ, ಜಿಪಂ ಸಿಇಒ ರವಿಕುಮಾರ್, ವಿಭಾಗಾಧಿಕಾರಿ ಸೋಮಶೇಖರ್, ಎಎಸ್‌ಪಿ ಜಾಹ್ನವಿ, ಡಿಡಿಪಿಐ ಕೆ.ಎಂ.ಜಯರಾಮರೆಡ್ಡಿ, ಡಿಹೆಚ್‌ಒ ವಿಜಯಕುಮಾರ್, ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು, ಡಿಸಿ ಕಚೇರಿಯ ಹರಿಪ್ರಸಾದ್, ನಗರಸಭೆ ಆಯುಕ್ತ ಶ್ರೀಕಾಂತ್,ನಗರಾಭಿವೃದ್ದಿ ಕೋಶದ ನಿರ್ದೇಶಕ ರಂಗಸ್ವಾಮಿ, ಸರ್ವೇಕ್ಷಣಾಧಿಕಾರಿ ಡಾ.ಚಾರಿಣಿ, ಜಗದೀಶ್, ಗೌತಮ್, ರತ್ನಪ್ಪಮೇಲಾಂಗಣಿ ಮತ್ತಿತರ ಎಲ್ಲಾ ಇಲಾಖೆಗಳ ಅಧಿಕಾರಿಗಳು ಇದ್ದರು.