ಚಳಿಗಾಲದಲ್ಲಿ ಮುಂಜಾಗ್ರತೆ ವಹಿಸುವುದು ಅಗತ್ಯ

ಕಲಬುರಗಿ.ಡಿ.03:ಕಳೆದ ಕೆಲವು ದಿವಸಗಳಿಂದ ಚಳಿಯ ಪ್ರಮಾಣದ ಹೆಚ್ಚಾಗಿದ್ದು, ಇದು ಮುಂದಿನ ದಿವಸಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಆಗುವದುರಿಂದ ಬೆಳಗ್ಗೆ ಮತ್ತು ಸಾಯಂಕಾಲ ಚಳಿ ಹೆಚ್ಚಾಗಿರುವ ಸಮಯದಲ್ಲಿ ವ್ಯಾಯಾಮ ಮಾಡುವುದು, ಸುತ್ತಾಡುವುದು, ಕೆಲಸ ಮಾಡುವುದು ಬೇಡ. ಬೆಚ್ಚಗಿನ ಉಡುಪುಗಳನ್ನು ಧರಿಸಬೇಕು. ಎಣ್ಣೆಯಲ್ಲಿ ಬೇಯಿಸಿದ ಆಹಾರ ಸೇವನೆ ಬೇಡ. ಚಳಿಯಲ್ಲಿ ಹೆಚ್ಚಿನ ಚಲನೆ ಹೃದಯಘಾತಕ್ಕೆ ಪೂರಕವಾಗುವದರಿಂದ ಚಳಿಗಾಲದ ಬಗ್ಗೆ ಪ್ರತಿಯೊಬ್ಬರು ಮುಂಜಾಗ್ರತೆ ವಹಿಸುವುದು ಅಗತ್ಯವಾಗಿದೆ ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಕೇಶ್ವಾರ ಸಲಹೆ ನೀಡಿದರು.
ನಗರದ ಶೇಖರೋಜಾದಲ್ಲಿನ ಶಹಾಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ಸಹಯೋಗದೊಂದಿಗೆ ಶುಕ್ರವಾರ ಏರ್ಪಡಿಸಿದ್ದ ‘ಚಳಿಗಾಲದ ಮುಂಜಾಗ್ರತೆ ಕ್ರಮಗಳು’ ಎಂಬ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಚಳಿಯ ಪರಿಣಾಮದಿಂದ ಶೀತ, ನೆಗಡಿ, ಜ್ವರ, ನ್ಯೂಮೋನಿಯಾ, ಒಣಗಿದ ಚರ್ಮ, ಅಜೀರ್ಣ ಸಮಸ್ಯೆ ಕಂಡುಬರುತ್ತದೆ. ಚಳಿ ಹೆಚ್ಚಾದಾಗ ರಕ್ತ ಚಲನೆಯಲ್ಲಿ ಅಡಚಣೆ ಉಂಟಾಗಿ ತೊಂದರೆಯಾಗುತ್ತದೆ. ಬೆಚ್ಚಗಿನ ನೀರು, ಆಹಾರ ಸೇವನೆ ಅಗತ್ಯ. ಸಂಪೂರ್ಣ ದೇಹದ ಬಟ್ಟೆಗಳನ್ನು ಧರಿಸುವುದು, ಸ್ವಚ್ಛತೆಯನ್ನು ಕಾಪಾಡುವುದು, ತಂಪಾದ ನೀರು, ಪಾನೀಯಗಳ ಸೇವಿಸದಿರುವುದು, ವ್ಯಾಯಮ, ಯೋಗ ಮಾಡುವುದು, ಉತ್ತಮ ವಿಶ್ರಾಂತಿ ಪಡೆಯುವುದು, ಕೈ-ಕಾಲುಗಳನ್ನು ಆಗಾಗ್ಗೆ ಸ್ವಚ್ಚಗೊಳಿಸಿಕೊಳ್ಳುವುದು, ಧೂಮಪಾನ, ಮದ್ಯಪಾನ ಸೇವಿಸದಿರುವುದು, ‘ಡಿ’ ಜೀವಸತ್ವದ ಆಹಾರವನ್ನು ಹೆಚ್ಚಾಗಿ ಸೇವಿಸುವಂತಹ ಅನೇಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಚಳಿಗಾಲದಲ್ಲಿ ಉಂಟಾಗಬಹುದಾದ ಆರೋಗ್ಯ ಸಮಸ್ಯೆಗಳಿಂದ ದೂರವಿರಬಹುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕ ಎಚ್.ಬಿ.ಪಾಟೀಲ, ಪ್ರಮುಖರಾದ ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ಸಿದ್ದರಾಮ ತಳವಾರ, ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಪುಷ್ಪಾ ರತ್ನಹೊನ್ನದ್, ನಾಗೇಶ್ವರಿ ಮುಗಳಿವಾಡಿ, ಗಂಗಾಜ್ಯೋತಿ ಗಂಜಿ, ನಾಗೇಶ್ವರಿ ಮುಗಳಿವಾಡಿ, ಲಕ್ಷ್ಮೀ, ಸಂಗಮ್ಮ, ಜಗನಾಥ ಗುತ್ತೇದಾರ, ರೇಷ್ಮಾ, ಶ್ರೀದೇವಿ ಸಾಗರ, ಗುರುರಾಜ ಕೈನೂರ್, ಭಾಗ್ಯವಂತ ಜೋಶಿ, ಸರೋಜಾ, ಶರಣು, ನಾಗಮ್ಮ ಚಿಂಚೋಳಿ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.