ಚಳಿಗಾಲದಲ್ಲಿ ಕೊರೊನಾ ಹೆಚ್ಚುವ ಸಂಭವ-ಅಗತ್ಯ ಸಿದ್ದತೆ-ಜನ ಮೈಮರೆಯುವಂತಿಲ್ಲ:ಮಹಾಂತೇಶ ಬೀಳಗಿ


ದಾವಣಗೆರೆ ಅ.೩೧;ಎಲ್ಲರ ಪ್ರಯತ್ನದಿಂದ ಜಿಲ್ಲೆಯಲ್ಲಿ ಕೋವಿಡ್-೧೯ ಪಾಸಿಟಿವಿಟಿ ಮತ್ತು ಮರಣ ಪ್ರಮಾಣಗಳೆರಡೂ ಕಡಿಮೆಯಾಗಿರುವುದು ಸಂತಸದ ವಿಚಾರವಾದರೂ ಯಾರೋಬ್ಬರೂ ಮೈಮರೆಯಬಾರದು. ಕೊರೊನಾ ಪ್ರಕರಣ ಕಡಿಮೆಯಾದ ಮಾತ್ರಕ್ಕೆ ಕೊರೊನಾ ಯುದ್ದ ಗೆದ್ದ ಭಾವನೆ ಸಲ್ಲದು. ಚಳಿಗಾಲದ ವಾತಾವರಣದಲ್ಲಿ ಇದು ಹೆಚ್ಚಾಗುವ ಸಂಭವವಿದ್ದು ಎಲ್ಲರೂ ಮೊದಲಿಗಿಂತ ಹತ್ತು ಪಟ್ಟು ಎಚ್ಚರಿಕೆಯಿಂದ ಇರಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.
ಕೋವಿಡ್ ೧೯ ಸಂಬಂಧ ಮಾಹಿತಿ ನೀಡಲು ಶುಕ್ರವಾರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೊಷ್ಟಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಆರೋಗ್ಯ ಇಲಾಖೆಯ ವೈದ್ಯರು, ಶುಶ್ರೂಷಕರು, ಡಿ ಗ್ರೂಪ್ ಆದಿಯಾಗಿ ಎಲ್ಲ ಇಲಾಖೆಗಳ ಅಧಿಕಾರಿಗಳು, ನೌಕರರ ಪರಿಶ್ರಮದಿಂದ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ಪ್ರಮಾಣ ಶೇ.೫ ಕ್ಕೆ ಬಂದಿದೆ. ಹಾಗೂ ಮರಣ ಪ್ರಮಾಣ ಸರಾಸರಿ ಶೇ.೧.೨ ಇದೆ. ಪ್ರತಿ ದಿನ ೬೦, ೭೦ ಹೀಗೆ ೧೦೦ ರ ಒಳಗೆ ಕೊರೊನಾ ಪ್ರಕರಣ ಬರುತ್ತಿವೆ. ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಇಂದು ಕೇವಲ ೮೭ ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಇಲ್ಲಿ ಕೇವಲ ೦೧ ರೋಗಿಗೆ ಮಾತ್ರ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಾಗೂ ಜಿಲ್ಲೆಯಲ್ಲಿ ಒಟ್ಟು ೧೧ ಜನ ಮಾತ್ರ ವೆಂಟಿಲೇಟರ್‌ನಲ್ಲಿದ್ದಾರೆ.
ಪ್ರತಿದಿನ ೨ ರಿಂದ ಎರಡೂವರೆ ಸಾವಿರ ಕೊರೊನಾ ಪರೀಕ್ಷೆ ನಡೆಸಲಾಗುತ್ತಿದ್ದರೂ ನೂರಕ್ಕಿಂತ ಕಡಿಮೆ ಪ್ರಕರಣ ದಾಖಲಾಗುತ್ತಿದ್ದು, ಗಂಭೀರ ಪ್ರಕರಣಗಳ್ಯಾವೂ ದಾಖಲಾಗುತ್ತಿಲ್ಲ. ಶೀಘ್ರ ಆಸ್ಪತ್ರೆಗೆ ದಾಖಲು, ವೆಂಟಿಲೇಟರ್‌ಗೆ ಹೋಗದಂತೆ ವೈದ್ಯರು ಎಚ್ಚರಿಕೆಯಿಂದ ಚಿಕಿತ್ಸೆ ನೀಡುತ್ತಿರುವುದು ಗಂಭೀರ ಪ್ರಕರಣಗಳ ಸಂಖ್ಯೆ ಕಡಿಮೆಯಾಗಲು ಕಾರಣವಾಗಿದೆ. ಹಾಗು ಪ್ರತಿ ಹಂತದಲ್ಲಿ ವೈದ್ಯರ ಪರಿಶ್ರಮ ಅಭಿನಂದನಾರ್ಹವಾಗಿದೆ ಎಂದರು.
ಪ್ರಸ್ತುತ ಜಿಲ್ಲೆಯಲ್ಲಿ ೭೨೮ ಸಕ್ರಿಯ ಪ್ರಕರಣ ಮಾತ್ರ ಇದ್ದು ಇದರಲ್ಲಿ ೪೦೦ ಕ್ಕೂ ಹೆಚ್ಚು ಜನರು ಹೋಂ ಐಸೋಲೇಷನ್‌ನಲ್ಲಿದ್ದಾರೆ. ಕೋವಿಡ್ ಕೇರ್ ಸೆಂಟರ್‌ಗಳಲ್ಲಿ(ಸಿಸಿಸಿ) ೨೫ ಜನ ಮಾತ್ರ ಇದ್ದಾರೆ. ಹರಿಹರ, ಚನ್ನಗಿರಿ, ಜಗಳೂರು ತಾಲ್ಲೂಕಿನ ಸಿಸಿಸಿ ಗಳಲ್ಲಿ ಯಾವುದೇ ಸೋಂಕಿತರು ಇರುವುದಿಲ್ಲ ಎಂದರು.
೫೦೦೦ ಪ್ರಕರಣಗಳಿಗೆ ಸಿದ್ದತೆ : ಕೊರೊನ ಪ್ರಕರಣಗಳು ಕಡಿಮೆಯಾಗುತ್ತಿವೆ ಎಂಬ ಮಾತ್ರಕ್ಕೆ ಗೆದ್ದ ಭಾವನೆ ಸಲ್ಲದು. ಮುಂಬರುವ ದಿನಗಳು ಇನ್ನೂ ಕಠಿಣಕರವಾಗಿವೆ. ನವೆಂಬರ್‌ನಿಂದ ಚಳಿಗಾಲ ಹೆಚ್ಚಾಗಲಿದ್ದು, ಇನ್ನೊಂದು ವಾರ, ಹದಿನೈದು ದಿನಗಳಲ್ಲಿ ಪ್ರಕರಣ ಹೆಚ್ಚಾಗುವ ಸಂಭವ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದ ಕಾರಣ ಜಿಲ್ಲೆಯಲ್ಲಿ ಒಂದು ದಿನಕ್ಕೆ ೫೦೦೦ ಜನರಿಗೆ ಚಿಕಿತ್ಸೆ ನೀಡಲು ಬೇಕಾದ ಮೂಲಭೂತ ಸೌಕರ್ಯ, ಆಕ್ಸಿಜನ್, ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಪ್ಲಾಂಟ್, ತಜ್ಞರು, ಕನ್ಸಲ್ಟೆಂಟ್ಸ್, ಸಿಬ್ಬಂದಿಯನ್ನು ತಯಾರಿ ಮಾಡಿಕೊಂಡಿದ್ದೇವೆ. ನ.೧೦ ರಿಂದ ೧೫ ರನಂತರ ಈ ಹಿಂದೆ ವಹಿಸಿದ್ದಕ್ಕಿಂತ ೧೦ ಪಟ್ಟು ಎಚ್ಚರಿಕೆ ವಹಿಸಬೇಕು. ಉಸಿರಾಟ ಸಂಬಂಧಿತ ಕಾಯಿಲೆಗಳು, ಟಿಬಿ, ಅಸ್ತಮಾ, ಪಲ್ಮನರಿ ಕಾಯಿಲೆ, ಅಲರ್ಜಿ ಇರುವವರು, ಮಕ್ಕಳು, ವೃದ್ದರು ಜೊತೆಗೆ ಐಎಲ್‌ಡಿ() ಕೋವಿಡ್ ಬಂದು ಗುಣಮುಖರಾದವರನ್ನೂ ದುರ್ಬಲ ವರ್ಗವೆಂದು ಪರಿಗಣ ಸಿದ್ದು, ಇವರೆಲ್ಲರೂ ಹೆಚ್ಚಿನದಾಗಿ ಜಾಗರೂಕರಾಗಿ ಮುನ್ನೆಚ್ಚರಿಕೆ ವಹಿಸಬೇಕು.
ಆಕ್ಸಿಜನ್ ಬೆಡ್‌ಗಳ ಹೆಚ್ಚಳ : ಜಿಲ್ಲೆಯಲ್ಲಿ ಆಕ್ಸಿಜನ್ ಬೆಡ್‌ಗಳ ಸಂಖ್ಯೆ ಹೆಚ್ಚಿದೆ. ಪ್ರಸ್ತುತ ೭೧೭ ಆಕ್ಸಿಜನ್ ಬೆಡ್‌ಗಳಿದ್ದು, ಇದರಲ್ಲಿ ೩೮ ಹೆಚ್‌ಎಫ್‌ಓ , ೩೧ ವೆಂಟಿಲೇಟರ್, ೨೦ ನಾನ್‌ಇನ್‌ವೇಸಿವ್ ವೆಂಟಿಲೇಟರ್‌ಗಳಿವೆ. ೮೦೦೦ ರ್‍ಯಾಪಿಡ್ ಕಿಟ್ಸ್‌ಗಳು ಮತ್ತು ೨೭ ಸಾವಿರ ಆರ್‌ಟಿಪಿಸಿಆರ್ ಕಿಟ್‌ಗಳ ದಾಸ್ತಾನು ಇದೆ.
ಶೇ.೯೫ ಗುಣಮುಖ : ಜಿಲ್ಲೆಯಲ್ಲಿ ಗುಣಮುಖ ಪ್ರಮಾಣ ಶೇ.೯೫ ಇದೆ. ಮರಣ ಪ್ರಮಾಣ ಶೇ.೧ ಹಾಗೂ ಸಕ್ರಿಯ ಪ್ರಕರಣಗಳು ಶೇ.೪ ಇದೆ. ವೈದ್ಯರ ತಂಡ, ಜಿಲ್ಲಾಡಳಿತ, ಜಿ.ಪಂ, ಪಾಲಿಕೆ ಸೇರಿದಂತೆ ನಮ್ಮ ತಂಡ ತೃಪ್ತಿದಾಯಕ ಕೆಲಸ ಮಾಡುತ್ತಿದೆಯಾದರೂ, ಕಲಸ ಮುಗಿದ ಭಾವನೆ ತಂಡದಲ್ಲಿ ಇಲ್ಲ. ಮುಂದೆಯೂ ಹಿಂದಿನಷ್ಟೇ ಸ್ಪೂರ್ತಿಯಿಂದ, ಸಕ್ರಿಯವಾಗಿ ನಮ್ಮ ತಂಡ ಕೆಲಸ ಮಾಡಲಿದೆ ಎಂದರು.
ಹಬ್ಬ ಹರಿದಿನವೆನ್ನದೇ ನಮ್ಮ ಸಿಬ್ಬಂದಿ ಪರೀಕ್ಷೆಯನ್ನು ನಡೆಸುತ್ತಿದ್ದು, ಡೆತ್ ಪಾಕೆಟ್ಸ್, ಸಂಪರ್ಕಿತರ ಮನೆಗಳ ಸುತ್ತಮುತ್ತ, ಜನಸಂದಣ ಇರುವಲ್ಲಿ ಹೆಚ್ಚಿನ ಪರೀಕ್ಷೆ ಮಾಡುತ್ತಿದೆ. ಈ ರೀತಿ ನಮ್ಮ ಕಡೆಯಿಂದ ಸಂಪೂರ್ಣ ತಯಾರಿ ಮಾಡಿಕೊಂಡಿದ್ದರೂ ಜನರು ಮೈಮರೆಯಬಾರದು. ಹೊರಗೆ ಹೋಗುವಾಗ ಎಚ್ಚರಿಕೆಯಿಂದ ಇರಬೇಕು. ಅನಗತ್ಯವಾಗಿ ಹೊರಗೆ ಹೋಗಬಾರದು ಎಂದರು
ಎಲ್ಲರೂ ಕೋವಿಡ್ ವರ್ತನೆಗಳಾದ ಕಡ್ಡಾಯ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಹಾಗೂ ಸ್ವಚ್ಚತೆ(ಸ್ಯಾನಿಟೈಸ್) ಜೊತೆಗೆ ರೋಗ ಬಾರದಂತೆ ಆಯುಷ್ ಔಷಧ, ಇತರೆ ರೊಗನಿರೋಧಕ ಶಕ್ತಿ ಹೆಚ್ಚಿಸುವ ಎಲ್ಲ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕು. ಚುನಾವಣೆ, ಹಬ್ಬ ಹರಿದಿನಗಳಲ್ಲಿ ವಿಶೇಷವಾಗಿ ಎಚ್ಚರಿಕೆ ವಹಿಸಬೇಕು. ಪ್ರಕರಣ ಕಡಿಮೆಯಾಗಿವೆ ಎಂದು ಮೈಮರೆಯಬಾರದು. ಮೈಮರೆತರೆ ರಿಪೇರಿ ಮಡಲಾರದಂತಹ ಹಾನಿಗೆ ಒಳಗಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ರಾಜ್ಯೋತ್ಸವ ಮಾರ್ಗಸೂಚಿ : ಕೋವಿಡ್ ೧೯ ವ್ಯಾಪಕವಾಗಿ ಹರಡುತ್ತಿರುವುದರಿಂದ ನ.೧ ರಂದು ಆಚರಿಸಲ್ಪಡುವ ನಾಡಹಬ್ಬ ಕನ್ನಡ ರಾಜ್ಯೋತ್ಸವನ್ನು ಸರಳವಾಗಿ ಆಚರಿಸಬೇಕೆಂದು ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಈ ಪ್ರಕಾರ ಕನ್ನಡ ರಾಜ್ಯೋತ್ಸವ ಸಮಾರಂಭದ ಧ್ವಜಾರೋಹಣ ಸ್ಥಳದಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಬಳಕೆ ಮತ್ತು ಸ್ಯಾನಿಟೈಸರ್‌ಗಳನ್ನು ಕಡ್ಡಾಯವಾಗಿ ಬಳಸಬೇಕು. ಗರಿಷ್ಟ ೧೦೦ ಜನರು ಮಾತ್ರ ಸೇರಲು ಅನುಮತಿಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆಗೆ ಯಾವುದೇ ಭಂಗ ಬಾರದಂತೆ ಕಾಪಾಡಬೇಕು. ರಾಜ್ಯೋತ್ಸವ ಸಂದರ್ಭದಲ್ಲಿ ಯಾವುದೇ ರೀತಿಯ ಮೆರವಣ ಗೆಗೆ ಅವಕಾಶವಿಲ್ಲ. ಭುವನೇಶ್ವರಿ ಪೂಜೆ ಸಲ್ಲಿಸಿ, ನಂತರ ಧ್ವಜಾರೋಹಣ ಕಾರ್ಯಕ್ರಮವಿರುತ್ತದೆ. ದುರ್ಬಲ ವರ್ಗದವರು ಭಾಗವಹಿಸುವಂತಿಲ್ಲ. ಕೋವಿಡ್ ೧೯ ಸಾಂಕ್ರಾಮಿಕ ಸೋಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಷ್ಟ್ರೀಯ ನಿರ್ದೇಶನಗಳನ್ನು ಹಾಗು ರಾಜ್ಯ ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳನ್ನು ತಪ್ಪದೇ ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ತಿಳಿಸಿದರು.
ಲಸಿಕಾ ಕಾರ್ಯಕ್ರಮಕ್ಕೆ ಡಬ್ಲ್ಯುಹೆಚ್‌ಓ ಮೆಚ್ಚುಗೆ: ಕಳೆದ ಆಗಸ್ಟ್ ಮಾಹೆಯಲ್ಲಿ ಆರೋಗ್ಯಹ ಇಲಾಖೆ ವತಿಯಿಂದ ಶಾಲಾ ಮಕ್ಕಳಿಗೆ ನೀಡುವ ವಿವಿಧ ಲಸಿಕಾ ಅಭಿಯಾನವನ್ನು ಕೋವಿಡ್ ಹಿನ್ನೆಲೆಯಲ್ಲಿ ಎಲ್ಲ ನಿಯಮಾವಳಿಗಳನ್ನು ಪಾಲಿಸಿ ಅಳುಕಿಲ್ಲದೇ ಮೊದಲು ಪ್ರಾರಂಭಿಸಿದ ದಾವಣಗೆರೆ ಜಿಲ್ಲೆಯ ಕ್ರಮಕ್ಕೆ ಡಬ್ಲ್ಯುಹೆಚ್‌ಓ ಮೆಚ್ಚುಗೆ ವ್ಯಕ್ತಪಡಿಸಿದೆ. ಹಾಗೂ ವಿವಿಧ ಲಸಿಕಾ ಅಭಿಯಾನವನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಿದ್ದಕ್ಕಾಗಿ ರಾಜ್ಯಕ್ಕೆ ಬೆಳ್ಳಿ ಪ್ರಶಸ್ತಿ ದೊರೆತಿರುವುದು ಸಂತಸ ತಂದಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಕೋವಿಡ್ ಜಿಲ್ಲಾ ನೋಡಲ್ ಅಧಿಕಾರಿ ಪ್ರಮೋದ್‌ನಾಯಕ್, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಪಾಲಿಕೆ ಆಯುಕ್ತರಾದ ವಿಶ್ವನಾಥ ಮುದಜ್ಜಿ, ಡಿಹೆಚ್‌ಓ ಡಾ.ನಾಗರಾಜ್, ಡಿಎಸ್ ಡಾ.ಜೈಪ್ರಕಾಶ್, ಡಿಎಸ್‌ಓ ಡಾ.ರಾಘವನ್, ಆರ್‌ಸಿಹೆಚ್‌ಓ ಡಾ.ಮೀನಾಕ್ಷಿ, ಡಾ.ರವಿ ಇತರೆ ಅಧಿಕಾರಿಗಳು ಹಾಜರಿದ್ದರು.