ಚಲ್ದಿಗಾನಹಳ್ಳಿ ಸರ್ಕಾರಿ ಶಾಲೆಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಭರವಸೆ- ಕೆ.ಹೆಚ್.ಮುನಿಯಪ್ಪ

ಕೋಲಾರ,ಆ.೮- ದೇವರು ವರ ಕೊಟ್ಟರೂ ಪೂಜಾರಿ ಕೊಡ ಎಂಬ ಗಾದೆ ಮಾತಿದೆ ಅದರಂತೆಯೇ ಸರ್ಕಾರ ಶಿಕ್ಷಣದ ಅಭಿವೃದ್ದಿಗೆ ಸಾಕಷ್ಟು ಅನುದಾನವನ್ನು ಬಿಡುಗಡೆ ಮಾಡಿದ್ದರೂ ಅದನ್ನು ಸಮರ್ಪಕವಾಗಿ ಸದ್ಬಳಿಸಿ ಕೊಳ್ಳುವಲ್ಲಿ ಸಂಬಂಧ ಪಟ್ಟ ಅಧಿಕಾರಿಗಳ ನಿರ್ಲಕ್ಷತೆಯಿಂದ ಸರ್ಕಾರಕ್ಕೆ ಅನುದಾನ ವಾಪಾಸ್ ಅಗುತ್ತಿರುವ ಬಗ್ಗೆ ಜನಪ್ರತಿನಿಧಿಗಳನ್ನು ಕೆ.ಡಿ.ಪಿ. ಸಭೆಗಳು ಸೇರಿದಂತೆ ಅನೇಕ ಸಭೆಗಳಲ್ಲಿ ಅಧಿಕಾರಿಗಳಿಗೆ ಪದೇ ಪದೇ ಎಚ್ಚರಿಸಿದರು ಸಹ ಅಧಿಕಾರಿಗಳು ನಿರ್ಲಕ್ಷಿಸುತ್ತಿರುವುದಕ್ಕೆ ಅನೇಕ ಪ್ರಕರಣಗಳನ್ನು ಗಮನಿಸ ಬಹುದಾಗಿದೆ.


ಶ್ರೀನಿವಾಸಪುರದ ಚಲ್ದಿಗಾನಹಳ್ಳಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಜಾಗವನ್ನು ಶಾಲಾ ಶಿಕ್ಷಕಿ ರುಕ್ಮಣಿಬಾಯಿ ಅವರು ಅನೇಕ ವರ್ಷಗಳ ಸಾರ್ವಜನಿಕ ಹಿತಾಸಕ್ತಿಯ ದಾವೆಯನ್ನು ನ್ಯಾಯಾಲಯದಲ್ಲಿ ಹೊಡಿ ಸರ್ಕಾರಿ ಶಾಲಾ ಜಾಗವನ್ನು ಸರ್ಕಾರಕ್ಕೆ ಉಳಿಸಿ ಕೊಟ್ಟಿರುವುದು ಶಾಲೆಯ ಮೇಲೆ ಶಿಕ್ಷಕಿಗೆ ಇರುವ ನಿಜವಾದ ಕಾಳಜಿಯಾಗಿದೆ ಎನ್ನ ಬಹುದಾಗಿದೆ.
ಈ ಶಾಲೆಯ ಸುತ್ತಮುತ್ತ ಇದ್ದ ಸರ್ಕಾರಿ ಜಾಗದಲ್ಲಿ ಗ್ರಾಮದ ಅನೇಕ ಮಂದಿ ತಿಪ್ಪೆಗಳನ್ನಾಗಿ ಮಾಡಿ ಕೊಂಡಿದ್ದರು, ಇದನ್ನು ತೆರವು ಮಾಡಿಸಲು ರುಕ್ಮಿಣಿಬಾಯಿ ಅವರು ಹಿರಿಯ ವಕೀಲರಾದ ದಿ.ಕೆ.ಮುನಿಸ್ವಾಮಿ ಗೌಡರು ಚಲ್ದಿಗಾನಹಳ್ಳಿಯವರೇ ಅಗಿದ್ದ ಹಿನ್ನಲೆಯಲ್ಲಿ ಅವರ ಗಮನಕ್ಕೆ ತಂದಾಗ ಗ್ರಾಮದಲ್ಲಿ ಹಲವಾರು ಪಂಚಾಯಿತಿಗಳನ್ನು ಮಾಡಿದರೂ ಸಹ ಕೆಲವರು ತಿಪ್ಪೆಯನ್ನು ತೆರವು ಮಾಡದೆ ಅಡ್ಡಿ ಪಡಿಸಿದಾಗ ನ್ಯಾಯಾಲಯದಲ್ಲಿ ದಾವೆ ಹೊಡುವುದು ಅನಿವಾರ್ಯವಾಗಿ ಸತತವಾದ ಈ ಹೋರಾಟದಲ್ಲಿ ಅಂತಿಮವಾಗಿ ಮುಖ್ಯ ಶಿಕ್ಷಕಿ ರುಕ್ಮಿಣಿಬಾಯಿ ಅವರ ಪರವಾಗಿ ನ್ಯಾಯಾಲಯವು ತೀರ್ಪು ನೀಡಿದ ಹಿನ್ನಲೆಯಲ್ಲಿ ಚಲ್ದಿಗಾನಹಳ್ಳಿ ಸರ್ಕಾರಿ ಶಾಲೆಯು ವಿಶಾಲವಾದ ಜಾಗವನ್ನು ಹೊಂದಿದೆ.


ಈ ಶಾಲೆಯಲ್ಲಿ ಸುಮಾರು ೨೦೦ ಮಂದಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಅದರೆ ಇತ್ತೀಚೆಗೆ ಖಾಸಗಿ ಶಾಲೆಗಳ ಹಾವಳಿಯಿಂದಾಗಿ ಕಾನ್ವೆಂಟ್ ಶಾಲೆಗಳ ವ್ಯಾಮೋಹಕ್ಕೆ ಅಕರ್ಷಿತರಾದ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಿಂದ ಖಾಸಗಿ ಶಾಲೆಗೆ ಸೇರ್ಪಡೆ ಮಾಡಿದ ಹಿನ್ನಲೆಯಲ್ಲಿ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.
ಸರ್ಕಾರಿ ಶಾಲೆಗೆ ಅಗತ್ಯವಾದ ಕೊಠಡಿಯನ್ನು ದಿ.ಕೆ.ಮುನಿಸ್ವಾಮಿಗೌಡರು ಒಂದು ಕೊಠಡಿಯನ್ನು ತಮ್ಮ ಖಾಸಗಿ ವೆಚ್ಚದಲ್ಲಿ ನಿರ್ಮಿಸಿ ಕೊಟ್ಟಿದ್ದಾರೆ. ಇದಕ್ಕೆ ನೆರವು ನೀಡಲು ಈ ಹಿಂದೆ ಹಲವು ಮಂದಿ ನೆರವು ನೀಡಿದ್ದರು. ಅದರೆ ಶಾಲೆಯ ನಿರ್ವಾಹಣೆಯನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ನಿರ್ಲಕ್ಷಿಸಿರುವ ಹಿನ್ನಲೆಯಲ್ಲಿ ಶಾಲೆಯ ಕೊಠಡಿಗಳು ಮಳೆ ಬಂದರೆ ಸೋರುತ್ತಿದೆ. ಗೋಡೆಗಳು ಸೀಳು ಬಿಟ್ಟಿದ್ದು ದುರಸ್ಥಿ ಮಾಡಬೇಕಾಗಿರುವುದು ಅನಿವಾರ್ಯವಾಗಿದೆ ಸಮರ್ಪಕವಾದ ಶೌಚಾಲಯ, ಕುಡಿಯುವ ನೀರಿನ ಕೊರತೆ ಇದೆ.ಈ ಕಾರಣಗಳಿಂದ ಪೋಷಕರು ಸರ್ಕಾರಿ ಶಾಲೆಯಿಂದ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರ್ಪಡೆ ಮಾಡುತ್ತಿದ್ದಾರೆ ಎಂಬುವುದು ಶಾಲೆಯ ಶಿಕ್ಷಕರ ಅಳಲಾಗಿದೆ.
ಮೊನ್ನೆ ನಡೆದ ವಕೀಲರಾದ ದಿ.ಕೆ.ಮುನಿಸ್ವಾಮಿ ಗೌಡರ ಜನ್ಮ ಶತಾಬ್ದಿಯಂದು ಅತಿಥಿಗಳಾಗಿ ಅಗಮಿಸಿದ್ದ ರಾಜ್ಯ ಆಹಾರ ಮತ್ತು ನಾಗರೀಕ ಪೂರೈಕೆಯ ಸಚಿವರಾದ ಕೆ. ಮುನಿಯಪ್ಪನವರಿಗೆ ವಕೀಲರಾದ ಎಂ.ಶಿವಪ್ರಕಾಶ್ ಅವರು ಶಾಲೆಯ ಕೊಠಡಿಗಳು ಸೇರಿದಂತೆ ಅಲ್ಲಿನ ಅವ್ಯವಸ್ಥೆಗಳನ್ನು ವಿವರಿಸಿ ಸ್ಥಳ ವೀಕ್ಷಣೆ ಮಾಡಿಸಿದಾಗ ಸಚಿವರು ಶಾಲೆಗೆ ಅಗತ್ಯವಾದ ಮೂಲಭೂತ ಸೌಲಭ್ಯಗಳನ್ನು ಸರ್ಕಾರದಿಂದ ಮಂಜೂರು ಮಾಡಿಸುವುದಾಗಿ ಭರವಸೆ ನೀಡಿರುವುದನ್ನು ಗ್ರಾಮಾಸ್ಥರು ಸ್ವಾಗತಿಸಿದ್ದಾರೆ.
ಶಾಲೆಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಭೇಟಿ ನೀಡಿ ಶಾಲೆಯ ಅವ್ಯವಸ್ಥೆಗಳನ್ನು ಮೂಲಭೂತ ಸೌಲಭ್ಯಗಳ ಕೊರತೆಯನ್ನು ಮೇಲಿನ ಅಧಿಕಾರಿಗಳ ಗಮನಕ್ಕೆ ತಂದಿದ್ದರೆ ಸರ್ಕಾರದ ಅನುದಾನದಿಂದ ಈ ಸೌಲಭ್ಯಗಳನ್ನು ಕಲ್ಪಿಸಲು ಅವಕಾಶವಿತ್ತು ಅದರೆ ಅಧಿಕಾರಿಗಳ ನಿರ್ಲಕ್ಷತನದಿಂದ ವಿದ್ಯಾರ್ಥಿಗಳು ಶಿಕ್ಷಕರು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ಗ್ರಾಮಾಸ್ಥರು ಅಸಮಾಧನ ವ್ಯಕ್ತ ಪಡೆಸಿದ್ದಾರೆ.