ಚಲೋ ದಿಲ್ಲಿಗೆ ಅಖಾಡ ಸಜ್ಜು

ಬೆಂಗಳೂರು, ಫೆ. ೬- ಕೇಂದ್ರದಿಂದ ರಾಜ್ಯಕ್ಕೆ ಆಗಿರುವ ಅನ್ಯಾಯ, ಅನುದಾನ ನೀಡಿಕೆಯಲ್ಲಿನ ತಾರತಮ್ಯವನ್ನು ಖಂಡಿಸಿ ರಾಜ್ಯದ ಕಾಂಗ್ರೆಸ್ ಸರ್ಕಾರ ದೆಹಲಿಯಲ್ಲಿ ನಾಳೆ ನಡೆಸಲಿರುವ ಪ್ರತಿಭಟನೆಗೆ ವೇದಿಕೆ ಸಜ್ಜಾಗಿದೆ.ನನ್ನ ತೆರಿಗೆ ನನ್ನ ಹಕ್ಕು ಘೋಷ ವಾಕ್ಯದಡಿ ದೆಹಲಿಯ ಜಂತರ್ ಮಂತರ್‌ನಲ್ಲಿ ನಾಳೆ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ರಾಜ್ಯದ ಸರ್ಕಾರ ಎಲ್ಲ ಸಚಿವರು, ಶಾಸಕರುಗಳು, ಪ್ರತಿಭಟನೆ ನಡೆಸಿ ಕೇಂದ್ರದಿಂದ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಜನರಿಗೆ ಮನದಟ್ಟು ಮಾಡುವ ಕೆಲಸ ಮಾಡಲಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧ ನಾಳೆ ನಡೆಯಲಿರುವ ಚಲೋ ದಿಲ್ಲಿ ಅಭಿಯಾನದ ಮೂಲಕ ಕೇಂದ್ರದಿಂದ ಆಗಿರುವ ತಾರತಮ್ಯ, ಸೌಲಭ್ಯ ನೀಡಿಕೆಯಲ್ಲಿ ಕನ್ನಡಿಗರಿಗೆ ಆಗಿರುವ ಅನ್ಯಾಯ ಎಲ್ಲವನ್ನು ಜಗಜ್ಜಾಹೀರು ಮಾಡುವ ಕೆಲಸವನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಮಾಡಲಿದೆ.
ಕೇಂದ್ರ ಸರ್ಕಾರದಿಂದ ೨೦೧೭-೧೮ ರಿಂದ ೧ ಲಕ್ಷ ೮೭ ಸಾವಿರ ಕೋಟಿ ರೂ. ರಾಜ್ಯಕ್ಕೆ ಅನುದಾನ ಮತ್ತು ತೆರಿಗೆ ಪಾಲಿನಲ್ಲಿ ಅನ್ಯಾಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನಿನ್ನೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿ, ಕೇಂದ್ರದ ಅನ್ಯಾಯವನ್ನು ಖಂಡಿಸಿ ನಾಳೆ ಚಲೋ ದಿಲ್ಲಿ ಅಭಿಯಾನವನ್ನು ನಡೆಸುತ್ತಿದ್ದು, ರಾಜ್ಯಕ್ಕೆ ಆಗಿರುವ ತಾರತಮ್ಯವನ್ನು ದೆಹಲಿಯಲ್ಲಿ ಪ್ರತಿಭಟನೆ ನಡೆಸುವ ಮೂಲಕ ಎಲ್ಲರ ಗಮನ ಸೆಳೆಯುತ್ತೇವೆ ಎಂದು ಹೇಳಿದ್ದರು. ಅದರಂತೆ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ವೇದಿಕೆ ಸಿದ್ದವಾಗಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಿನ್ನೆ ಸಂಜೆಯೇ ದೆಹಲಿಗೆ ತೆರಳಿ ಪ್ರತಿಭಟನಾ ಸ್ಥಳಕ್ಕೂ ಭೇಟಿ ನೀಡಿ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಇಂದು ಸಂಜೆ ಮುಖ್ಯಮಂತ್ರಿ ಸಿದ್ಧರಾಮಯ್ಯ ದೆಹಲಿ ತಲುಪಲಿದ್ದು, ಅವರ ಜತೆಯೇ ಸರ್ಕಾರದ ಎಲ್ಲ ಸಚಿವರು, ಶಾಸಕರು ಸಹ ದೆಹಲಿಗೆ ತೆರಳಿ, ನಾಳೆ ಜಂತರ್ ಮಂತರ್‌ನಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವರು. ಜಂತರ್ ಮಂತರ್‌ನಲ್ಲಿ ನಾಳೆ ನಡೆಯಲಿರುವ ಪ್ರತಿಭಟನೆ ರಾಜಕೀಯ ಉದ್ದೇಶ ಹೊಂದಿಲ್ಲ. ಇದು ಬಿಜೆಪಿ ವಿರುದ್ಧವೂ ಅಲ್ಲ, ಬಿಜೆಪಿ ಶಾಸಕರು, ಸಂಸದರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡು ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತುವಂತೆ ಸಿದ್ಧರಾಮಯ್ಯ ನಿನ್ನೆಯೇ ಮನವಿ ಮಾಡಿದ್ದರು.
ಬರ ಪರಿಹಾರಕ್ಕೆ ಕೇಂದ್ರ ಬಿಡಿಗಾಸು ಕೊಟ್ಟಿಲ್ಲ. ೧೫ನೇ ಹಣಕಾಸು ಯೋಜನೆಯ ಶಿಫಾರಸ್ಸಿನಂತೆ ೫೪೯೫ ಕೋಟಿ ರೂ. ವಿಶೇಷ ಅನುದಾನ ಬಂದಿಲ್ಲ. ತೆರಿಗೆ ಪಾಲಿನಲ್ಲೂ ತಾರತಮ್ಯವಾಗಿ ೬೨೦೯೮ ಕೋಟಿ ರೂ. ಐದು ವರ್ಷಗಳಲ್ಲಿ ತೆರಿಗೆ ನಷ್ಟವಾಗಿದೆ. ಭದ್ರಾ ಮೇಲ್ದಂಡೆ ಯೋಜನೆಗೂ ಹಣ ನೀಡಿಲ್ಲ. ಕೇಂದ್ರ ಸಹಭಾಗಿತ್ವದ ಅನುದಾನ ಕಡಿತವಾಗಿದೆ. ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಕನಸು ಕನಸಾಗಿಯೇ ಉಳಿದಿದೆ. ಮಹದಾಯಿ- ಮೇಕೆದಾಟು ಯೋಜನೆಗೂ ಮನ್ನಣೆ ಸಿಕ್ಕಿಲ್ಲ ಎಂದು ರಾಜ್ಯ ಸರ್ಕಾರ ಕೇಂದ್ರದ ವಿರುದ್ಧ ಆರೋಪದ ಸುರಿ ಮಳೆಗೈದಿದೆ.
ಪ್ರತಿಭಟನೆಯಲ್ಲಿ ಪಾಲ್ಗೊಳ್ಳಿ:ಎಲ್ಲ ಸಂಸದರಿಗೆ ಸಿಎಂ ಪತ್ರ
ದೆಹಲಿಯ ಜಂತರ್ ಮಂತರ್‌ನಲ್ಲಿ ನಾಳೆ ನಡೆಯಲಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ರಾಜ್ಯವನ್ನು ಪ್ರತಿನಿಧಿಸುವ ಎಲ್ಲ ಕೇಂದ್ರ ಸಚಿವರಿಗೆ, ಸಂಸದ್ ಸದಸ್ಯರಿಗೆ ಖುದ್ದು ಪತ್ರ ಬರೆದಿದ್ದಾರೆ.
ಕನ್ನಡಿಗರ ಹಕ್ಕು ಮತ್ತು ಸ್ವಾಭಿಮಾನಕ್ಕೆ ಕೇಂದ್ರದಿಂದ ನಿರಂತರವಾಗಿ ಆಗುತ್ತಿರುವ ಅನ್ಯಾಯ ಹಾಗೂ ಕನ್ನಡಿಗರ ತೆರಿಗೆ ಹಣಕ್ಕೆ ಆಗುತ್ತಿರುವ ವಂಚನೆಯನ್ನು ವಿರೋಧಿಸಿ ನಾಳೆ ದೆಹಲಿಯ ಜಂತರ್ ಮಂತರ್‌ನಲ್ಲಿ ಕನ್ನಡಿಗರ ಸ್ವಾಭಿಮಾನ ಹೋರಾಟ ನಡೆಯುತ್ತಿದೆ. ಈ ಹೋರಾಟಕ್ಕೆ ಬೆಂಬಲ ನೀಡಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರದ ಸಚಿವರಾದ ನಿರ್ಮಲಾ ಸೀತಾರಾಮನ್, ಪ್ರಹ್ಲಾದ ಜೋಷಿ, ಶೋಭಾ ಕರಂದ್ಲಾಜೆ, ಭಗವಾನ್ ಕೂಬಾ, ಎ. ನಾರಾಯಣಸ್ವಾಮಿ, ರಾಜೂ ಚಂದ್ರಶೇಖರ್ ಇವರುಗಳಿಗೆ ಪತ್ರ ಬರೆದಿದ್ದು, ಹಾಗೆಯೇ ಎಐಸಿಸಿ ಅಧ್ಯಕ್ಷ ಹಾಗೂ ಸಂಸದರಾದ ಮಲ್ಲಿಕಾರ್ಜುನಖರ್ಗೆ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಡಿ.ವಿ. ಸದಾನಂದಗೌಡ, ಜಗ್ಗೇಶ್, ಡಿ.ಕೆ. ಸುರೇಶ್, ಪಿ.ಸಿ. ಮೋಹನ್, ಜಯರಾಮ್ ರಮೇಶ್, ಹೀರಮಣ್ಣ ಕಡಾಡಿ, ವೀರೇಂದ್ರಹೆಗೆಡೆ, ಲೆಹರ್ ಸಿಂಗ್, ಜಿ.ಸಿ. ಚಂದ್ರಶೇಖರ್, ತೇಜಸ್ವಿ ಸೂರ್ಯ, ಮಂಗಳ ಸುರೇಶ್ ಅಂಗಡಿ, ವೈ. ದೇವೇಂದ್ರಪ್ಪ, ಪಿ.ಸಿ. ಗದ್ದಿ ಗೌಡರ್, ಎಲ್.ಹನುಮಂತಯ್ಯ, ಜಿ.ಎಸ್. ಬಸವರಾಜು, ಅನಂತಕುಮಾರ್ ಹೆಗಡೆ, ರಾಜಾ ಅಮರೇಶ್ವರ ನಾಯಕ್, ಪ್ರತಾಪ್ ಸಿಂಹ, ಸುಮಲತಾ ಅಂಬರೀಷ್, ಕರಡಿ ಸಂಗಣ್ಣ, ಎಸ್. ಮುನಿಸ್ವಾಮಿ, ಡಾ. ಉಮೇಶ್ ಜಾದವ್, ಶ್ರೀನಿವಾಸ್ ಪ್ರಸಾದ್, ಬಿ.ವೈ. ರಾಘವೇಂದ್ರ, ನಾಜೀರ್ ಹುಸೇನ್, ಪ್ರಜ್ವಲ್ ರೇವಣ್ಣ, ನಳಿನಕುಮಾರ್ ಕಟೀಲು, ಬಿ.ಎನ್. ಬಚ್ಚೇಗೌಡ, ಅಣ್ಣಾ ಸಾಹೇಬ್ ಜೊಲ್ಲೆ, ಶಿವಕುಮಾರ್ ಉದಾಸಿ, ಸಿ.ಎಂ. ಸಿದ್ಧೇಶ್ವರ್ ಸೇರಿದಂತೆ ಎಲ್ಲ ಲೋಕಸಭಾ ಹಾಗೂ ರಾಜ್ಯ ಸಭಾ ಸದಸ್ಯರುಗಳಿಗೆ ಪತ್ರ ಬರೆದು ನಾಳಿನ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಕೋರಿದ್ದಾರೆ.