ಚಲಿಸುವ ಕಾರಿಗೆ ನಾಯಿಕಟ್ಟಿ ವೈದ್ಯನ ವಿಕೃತಿ

ರಾಜಸ್ಥಾನ , ಸೆ ೧೯- ರಾಜಸ್ಥಾನದ ಜೋಧ್ ಪುರದಲ್ಲಿ ವೈದ್ಯರೊಬ್ಬರು ನಾಯಿಯ ಬಾಯಿಗೆ ಬಟ್ಟೆ ಕಟ್ಟಿ ಅದನ್ನು ಕಾರಿಗೆ ಕಟ್ಟಿ ನಗರದಾದ್ಯಂತ ಎಳೆದೊಯ್ದು ವಿಕೃತಿ ಮೆರೆದ ಘಟನೆಯೊಂದು ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೈದ್ಯ ಡಾ.ರಜನೀಶ್ ಗಾಲ್ವಾ ಎಂಬಾತ ಈ ರೀತಿ ವಿಕೃತಿ ಮೆರೆದಿದ್ದಾರೆ. ಇತನ ವಿರುದ್ಧ ಇದೀಗ ಪ್ರಾಣಿಹಿಂಸೆ ಪ್ರಕರಣ ದಾಖಲಾಗಿದೆ.
ಜೀವ ಕಾಪಾಡಬೇಕಾದ ವೈದ್ಯ ನಾಯಿಯನ್ನು ಈ ರೀತಿಯಾಗಿ ಕಾರಿಗೆ ಕಟ್ಟಿ ಹಿಂಸೆ ನೀಡಿರುವುದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ನಾಯಿ ಬೊಬ್ಬೆ ಹೊಡೆಯದಂತೆ ಬಾಯಿಗೆ ಬಟ್ಟೆಯಿಂದ ಕಟ್ಟಿ ಕುತ್ತಿಗೆಗೆ ಹಗ್ಗ ಬಿಗಿದು ಅದನ್ನು ತನ್ನ ಕಾರಿಗೆ ಕಟ್ಟಿ ಎಳೆದೊಯ್ದಿದ್ದಾನೆ. ಈ ವಿಡಿಯೋವನ್ನು ಅಲ್ಲಿದ್ದ ವ್ಯಕ್ತಿಯೊಬ್ಬರು ಸೆರೆ ಹಿಡಿದಿದ್ದು ಅಲ್ಲದೆ ಅದನ್ನು ಕಂಡ ಕೆಲವರು ಶ್ವಾನದ ರಕ್ಷಣೆಗೆ ಮುಂದಾಗಿದ್ದಾರೆ ಆದರೆ ವೈದ್ಯ ಮಾತ್ರ ಕಾರು ನಿಲ್ಲಿಸದೆ ಮುಂದೆ ಚಲಿಸಿದ್ದಾನೆ ಆದರೆ ಸಾರ್ವಜನಿಕರು ಮತ್ತೆ ಕಾರನ್ನು ಅಡ್ಡಕಟ್ಟಿ ಶ್ವಾನದ ರಕ್ಷಣೆ ಮಾಡಿದ್ದಾರೆ.
ಈ ವಿಡಿಯೋವನ್ನು ಸ್ಥಳೀಯರು ಸ್ವಯಂ ಸೇವಾ ಸಂಸ್ಥೆಗೆ ಕಳಿಸಿದ್ದಾರೆ. ಜೀವ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದ ನಾಯಿಯ ವಿಡಿಯೋ ನೋಡಿದ ಸ್ವಯಂ ಸೇವಾ ಸಂಸ್ಥೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಆ ಶ್ವಾನವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿದ ಡಾಗ್ ಹೋಮ್ ಫೌಂಡೇಶನ್ ನಾಯಿಯನ್ನು ಎಳೆದೊಯ್ದ ವ್ಯಕ್ತಿಯ ಮಾಹಿತಿ ಕಲೆಹಾಕಿದ್ದು ಆತನನ್ನು ಡಾ. ರಜನೀಶ್ ಗಾಲ್ವಾ ಎಂದು ಹೇಳಿಕೊಂಡಿದ್ದಾರೆ ಅಲ್ಲದೆ ವೈದ್ಯನ ಹೇಳಿಕೆಯಂತೆ ತನ್ನ ಮನೆಯ ಪಕ್ಕದಲ್ಲೇ ಬೀದಿ ನಾಯಿ ಅಡ್ಡಾಡುತ್ತಿದ್ದು ಇದರಿಂದ ಕಿರಿಕಿರಿಯಾಗುತ್ತಿತ್ತು ಅದಕ್ಕಾಗಿ ಅದನ್ನು ಬೇರೆಡೆಯೆ ಬಿಟ್ಟು ಬರಲು ಈ ರೀತಿಯಾಗಿ ಕರೆದೊಯ್ಯುತ್ತಿದ್ದೆ ಎಂದು ಹೇಳಿದ್ದಾರೆ.