ಚಲಿಸುತ್ತಿದ್ದ ರೈಲಿನಿಂದ ಬಿದ್ದುಇಬ್ಬರು ಬೌದ್ಧ ಬಿಕ್ಕು ಗಳು ಸಾವು

ಬೆಂಗಳೂರು,ಜೂ.14- ಚಲಿಸುತ್ತಿದ್ದ ರೈಲಿನಿಂದ ಇಬ್ಬರು ಬೌದ್ಧ ಬಿಕ್ಕು ಗಳು ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ನಗರದ ಹೊರವಲಯದ ಬೆತ್ತನಗೆರೆಯಲ್ಲಿ ನಡೆದಿದೆ. ರೈಲಿನ ಬಾಗಿಲಿನಲ್ಲಿ ಕುಳಿತಿದ್ದ ವೇಳೆ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾರೆ ಎಂದು ಶಂಕೆ ವ್ಯಕ್ತವಾಗಿದೆ. ಟ್ರ್ಯಾಕ್ ಮ್ಯಾನ್‌ನಿಂದ ಬೌದ್ಧ ಬಿಕ್ಕುಗಳ ಸಾವು ಪ್ರಕರಣ ಬೆಳಕಿಗೆ ಬಂದಿದೆ. ಕುಶಾಲನಗರದಿಂದ ಬೆಂಗಳೂರಿಗೆ ಇಬ್ಬರು ಬಿಕ್ಕುಗಳು ಬರುತ್ತಿದ್ದರು. ಸುಮಾರು 25 ವರ್ಷ ಆಸುಪಾಸಿನವರಾಗಿದ್ದು, ಕುಶಾಲನಗರದ ಗೋಲ್ಡನ್ ಟೆಂಪಲ್‌ಗೆ ಹೋಗಿ ಬರುತ್ತಿದ್ದರು ಎಂಬ ಮಾಹಿತಿ ಸಿಕ್ಕಿದೆ.
ಬಿಕ್ಕುಗಳ ಜೇಬಿನಲ್ಲಿ ಕುಶಾಲನಗರಕ್ಕೆ ಹೋಗಿರುವ ಬಸ್ ಟಿಕೆಟ್ ಪತ್ತೆ ಆಗಿದೆ. ಆದರೆ ಈವರೆಗೆ ಮೃತ ಇಬ್ಬರು ಬೌದ್ಧ ಬಿಕ್ಕುಗಳ ಗುರುತು ಪತ್ತೆಯಾಗಿಲ್ಲ. ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಮೃತದೇಹಗಳನ್ನು ರವಾನಿಸಲಾಗಿದೆ.
ಯಶವಂತಪುರ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.