ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ: ಚಾಲಕ ಸೇರಿ ಐವರು ಪ್ರಾಣಾಪಾಯದಿಂದ ಪಾರು

ಕಲಬುರಗಿ,ಮೇ.9-ಜಿಲ್ಲೆಯ ಕಮಲಾಪುರ ಪಟ್ಟಣದ ಹೊರವಲಯದ ಚಾರ್‍ಕಮಾನ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಚಾಲಕ ಸೇರಿ ಐವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹೈದ್ರಾಬಾದ್‍ನ ಬಂಜಾರ್ ಹಿಲ್ಸ್ ನಿವಾಸಿ ಮೊಹಮ್ಮದ್ ಜಲೀಲ್ ಅವರಿಗೆ ಸೇರಿದ್ದ ಫೋರ್ಡ್ ಫೀಸ್ಟಾ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಎರಡು ದಿನಗಳ ಹಿಂದೆ ಕಲಬುರಗಿಗೆ ಆಗಮಿಸಿದ್ದ ಇವರು ಚಾಲಕ ಸೇರಿ ಐವರು ಕೂಡಿ ಹೈದ್ರಾಬಾದ್‍ಗೆ ತೆರಳುತ್ತಿದ್ದರು.
ಕಲಬುರಗಿ ಮಿಲ್ಲತ್ ನಗರದ ಮೊಹಮ್ಮದ್ ಖದೀರ್ ಪಾಷಾ ಹಾಗೂ ಸಂಗಡಿಗರು ಸೌದಿಗೆ ತೆರಳುತ್ತಿದ್ದರು. ಅವರನ್ನು ಹೈದ್ರಾಬಾದ್ ವಿಮಾನ ನಿಲ್ದಾಣಕ್ಕೆ ಕರೆದೊಯ್ದು ಬಿಡಬೇಕಿತ್ತು. ಮಾರ್ಗ ಮಧ್ಯದ ಕಮಲಾಪುರ ಬಳಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣವೇ ಕಾರಿನಲ್ಲಿದ್ದ ಎಲ್ಲರೂ ಕೆಳಗಿಳಿದಿದ್ದಾರೆ.