ಚರ್ಮಗಂಟು ರೋಗ: ಕ್ರಮಕ್ಕೆ ಸೂಚನೆ

ಹುಬ್ಬಳ್ಳಿ, ನ.11: ಗ್ರಾಮೀಣ ಭಾಗದಲ್ಲಿ ಚರ್ಮಗಂಟು ರೋಗ ಕ್ಷಿಪ್ರಗತಿಯಲ್ಲಿ ಹರಡುತ್ತಿದೆ. ಚರ್ಮಗಂಟು ರೋಗದಿಂದ ಪ್ರಾಣಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿ ದೀಪಕ ಮಡಿವಾಳರ ಹೇಳಿದರು. ಹುಬ್ಬಳ್ಳಿಯ ತಾಲೂಕು ಆಡಳಿತ ಸೌಧದ ತಾಲೂಕು ಪಂಚಾಯತ ಸಭಾಭವನದಲ್ಲಿ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಚರ್ಮಗಂಟು ರೋಗದ ಹರಡುವಿಕೆ ಜಾಸ್ತಿಯಾಗುತ್ತಿದ್ದು, ಔಷಧಿ ಸಿಂಪಡಣೆ ಮಾಡಬೇಕು. ರೋಗದ ಕುರಿತು ರೈತರು ಹಾಗೂ ಜನರಲ್ಲಿ ಅರಿವು ಮೂಡಿಸಲು ಮುಂದಾಗಿ ಎಂದು ಮುಖ್ಯ ಪಶು ವೈದ್ಯಾಧಿಕಾರಿ ಎಸ್.ಜಿ. ರೋಣ ಅವರಿಗೆ ಸೂಚಿಸಿದರು. ಮುಖ್ಯ ಪಶು ವೈದ್ಯಾಧಿಕಾರಿ ಎಸ್.ಜಿ. ರೋಣ ಮಾತನಾಡಿ, 48 ಗ್ರಾಮಗಳ 1018 ಪ್ರಾಣಿಗಳಲ್ಲಿ ಚರ್ಮಗಂಟು ರೋಗ ಕಾಣಿಸಿಕೊಂಡಿದೆ. ಈಗಾಗಲೇ 597 ಪ್ರಾಣಿಗಳು ಗುಣಮುಖವಾಗಿವೆ. ಮುಂಜಾಗ್ರತಾ ಕ್ರಮವಾಗಿ 26, 543 ಪ್ರಾಣಿಗಳಿಗೆ ಲಸಿಕೆ ಹಾಕಲಾಗಿದೆ. 44 ಪ್ರಾಣಿಗಳು ಈ ರೋಗಕ್ಕೆ ಬಲಿಯಾಗಿವೆ. ರೋಗಕ್ಕೆ ಬಲಿಯಾದ ಕರುಗಳಿಗೆ ರೂ. 5 ಸಾವಿರ, ಆಕಳು ಮತ್ತು ಎಮ್ಮೆಗಳಿಗೆ ರೂ. 20 ಸಾವಿರ ಹಾಗೂ ಎತ್ತುಗಳ ಮಾಲೀಕರಿಗೆ ರೂ. 30 ಸಾವಿರ ಹಣವನ್ನು ಸರ್ಕಾರದಿಂದ ನೀಡಲಾಗುತ್ತಿದೆ ಎಂದು ಪ್ರತ್ಯುತ್ತರ ನೀಡಿದರು. ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರ್ ಕಂದಕೂರ್ ಮಾತನಾಡಿ, ಕುಸುಗಲ್ ಗ್ರಾಮದಲ್ಲಿ ವಿಕಲಚೇತನರಿಗಾಗಿ ಸಮುದಾಯ ಭವನವನ್ನು ನಿರ್ಮಾಣ ಮಾಡಲಾಗುವುದು. ಹೀಗಾಗಿ ಸೂಕ್ತ ಜಾಗದ ಅವಶ್ಯಕತೆಯಿದೆ. ಇದೇ ಗ್ರಾಮದಲ್ಲಿ ಬುದ್ಧಿಮಾಂದ್ಯ ಹಾಗೂ ದೈಹಿಕ ವಿಕಲಚೇತನರಿಗೆ ಥೇರಪಿ ಸೆಂಟರ್ ತೆಗೆಯಲಾಗುತ್ತದೆ. ಗ್ರಾಮ ಸಭೆಗಳಿಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಅಥವಾ ಅವರ ಪ್ರತಿನಿಧಿಗಳು ಕಡ್ಡಾಯವಾಗಿ ಹಾಜರಾಗಬೇಕು. ಜಲಜೀವನ್ ಮಿಷನ್ ಯೋಜನೆಯಡಿ ಹೊಸದಾಗಿ ಅಳವಡಿಸಿರುವ ನಳಗಳಿಗೆ ನೀರು ಬಿಡುವಂತೆ ಗ್ರಾಮ ಪಂಚಾಯತಿಯ ಅಧಿಕಾರಿಗಳು ಮುಂದಾಗಬೇಕಾಗಿದೆ. ಇದರಿಂದ ಹೊಸದಾಗಿ ಅಳವಡಿಸಿದ ಪೈಪಿನಲ್ಲಿ ನೀರು ಪೆÇೀಲಾಗುವುದನ್ನು ಪತ್ತೆ ಹಚ್ಚಬಹುದಾಗಿದೆ ಎಂದರು. ಸಹಾಯಕ ಕೃಷಿ ನಿರ್ದೇಶಕ ಆರ್.ಎ. ಆನಗೌಡರ ಮಾತನಾಡಿ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರು ನವೆಂಬರ್ 20 ರೊಳಗಾಗಿ ಇ ಕೆವೈಸಿ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು. ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಸಿಂದಗಿ,ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಸಿ.ಆರ್. ಅಂಬಿಗೇರ ಮಾತನಾಡಿದರು. ಈ ಸಂದರ್ಭದಲ್ಲಿ ವಿವಿಧ ಗ್ರಾಮ ಪಂಚಾಯತಗಳ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಇತರರು ಉಪಸ್ಥಿತರಿದ್ದರು.