ಚರ್ಮಗಂಟು ರೋಗಕ್ಕೆ 30 ಸಾವಿರ ಜಾನುವಾರು ಬಲಿ

ಬೆಂಗಳೂರು, ಫೆ. ೨೨- ರಾಜ್ಯಾದ್ಯಂತ ಜಾನುವಾರುಗಳಲ್ಲಿ ಕಾಣಿಸಿಕೊಂಡ ಚರ್ಮ ಗಂಟು ರೋಗಕ್ಕೆ ೩,೨೫,೩೫೩ ಜಾನುವಾರುಗಳ ತುತ್ತಾಗಿದ್ದು, ಈ ಪೈಕಿ ೩೦,೨೯೭ ಜಾನುವಾರುಗಳು ಸಾವನ್ನಪ್ಪಿವೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ವಿಧಾನ ಪರಿಷತ್ತಿನಲ್ಲಿಂದು ತಿಳಿಸಿದರು.
ಚರ್ಮಗಂಟು ರೋಗದಿಂದ ಸಾವನ್ನಪ್ಪಿದ ಜಾನುವಾರುಗಳ ಮಾಲೀಕರಿಗೆ ಇದುವರೆಗೂ ೩೭ ಕೋಟಿ ರೂ. ಪರಿಹಾರ ಬಿಡುಗಡೆ ಮಾಡಲಾಗಿದೆ. ಇನ್ನು ೧೨ ಕೋಟಿ ರೂ.ಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಿ ಚರ್ಮಗಂಟು ರೋಗದಿಂದ ಜಾನುವಾರು ಕಳೆದುಕೊಂಡ ಮಾಲೀಕರಿಗೆ ನೀಡಲಾಗುವುದು ಎಂದು ಅವರು ಹೇಳಿದರು.
ಕೆ.ಎ. ತಿಪ್ಪೇಸ್ವಾಮಿರವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಚರ್ಮಗಂಟು ರೋಗದಿಂದ ಮೃತಪಟ್ಟ ಜಾನುವಾರುಗಳ ಮಾಲೀಕರಿಗೆ ಪರಿಹಾರ ಧನವನ್ನು ಪ್ರತಿ ಕರುಗೆ ೫ ಸಾವಿರ, ಪ್ರತಿ ಹಸುಗೆ ೨೦ ಸಾವಿರ ಮತ್ತು ಪ್ರತಿ ಎತ್ತಿಗೆ ೩೦ ಸಾವಿರದಂತೆ ಘೋಷಿಸಲಾಗಿದೆ. ಈ ಸಂಬಂಧ ಪರಿಹಾರ ಹೆಚ್ಚಿಸುವ ಕುರಿತು ಪರಿಶೀಲನೆ ನಡೆಸಲಾಗುವುದು ಎಂದರು.
ಚರ್ಮಗಂಟು ರೋಗದಿಂದ ಮೃತಪಟ್ಟ ೩೦೨೯೭ ಜಾನುವಾರುಗಳ ಪೈಕಿ ೧೭೫೬೪ ಜಾನುವಾರುಗಳಿಗೆ ಪರಿಹಾರ ನೀಡಲಾಗಿದೆ ಎಂದು ಹೇಳಿದರು.
ಚರ್ಮಗಂಟು ರೋಗಕ್ಕೆ ತುತ್ತಾಗಿದ್ದ ೩,೨೫,೩೫೩ ಜಾನುವಾರುಗಳ ಪೈಕಿ ೨,೫೭,೦೮೪ ಜಾನುವಾರುಗಳು ಗುಣಮುಖವಾಗಿವೆ ಎಂದು ಅವರು ತಿಳಿಸಿದರು.
೨೦೨೨-೨೩ನೇ ಸಾಲಿನಲ್ಲಿ ಜಾನುವಾರುಗಳ ಚಿಕಿತ್ಸೆಗಾಗಿ ಔಷಧಿ ಮತ್ತು ರಸಾಯನಿಕಗಳನ್ನು ಪೂರೈಸಲು ರಾಜ್ಯ ವಲಯದ ಲೆಕ್ಕ ಶೀರ್ಷಿಕೆಯಡಿಯಲ್ಲಿ ೧೨.೬೨ ಕೋಟಿ ಅನುದಾನ ಹಾಗೂ ಜಿಲ್ಲಾ ವಲಯದಲ್ಲಿ ೫೪.೩೯ ಕೋಟಿ ಅನುದಾನ ಬಳಸಿಕೊಳ್ಳಲಾಗಿದೆ ಎಂದು ಹೇಳಿದರು.
ಚರ್ಮಗಂಟು ರೋಗ ಕಾಣಿಸಿಕೊಂಡ ತಕ್ಷಣವೇ ಜಾನುವಾರುಗಳ ಸಾಗಾಣಿಕೆಯನ್ನು ನಿರ್ಬಂಧಿಸಲು ಆಯಾ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಈ ರೋಗ ನಿಯಂತ್ರಣಕ್ಕೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆಯೂ ನಿರ್ದೇಶಿಸಲಾಗಿದೆ ಎಂದರು.
ತುರ್ತು ಚಿಕಿತ್ಸೆಗೆ ಅವಶ್ಯ ಇರುವ ಔಷಧಿ ಪೂರೈಸಲು ಪ್ರತಿ ತಾಲ್ಲೂಕಿಗೆ ಕನಿಷ್ಠ ೫ ಲಕ್ಷ ರೂ. ಅನುದಾನ ಒದಗಿಸಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ೧೪೦ ಜಾನುವಾರು ಜಾತ್ರೆ ಮತ್ತು ೧೦೧ ಜಾನುವಾರು ಸಂತೆಗಳು ನಡೆಯುತ್ತಿವೆ. ರೋಗದ ಲಕ್ಷಣ ಹಿನ್ನೆಲೆಯಲ್ಲಿ ಜಾನುವಾರುಗಳ ಸಾಗಾಟ, ಮಾರಾಟ, ಸಂತೆ ಮತ್ತು ಜಾತ್ರೆಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ ಎಂದು ಅವರು ತಿಳಿಸಿದರು.