ಚರ್ಚ್ ಧ್ವಂಸ: ೧೦೦ ಮಂದಿ ಬಂಧನ

ಕರಾಚಿ, ಆ.೧೮- ಇತ್ತೀಚಿಗಿನ ವರ್ಷಗಳಲ್ಲಿ ಧಾರ್ಮಿಕ ಅಲ್ಪಸಂಖ್ಯಾತ ಧರ್ಮಗಳ ಮೇಲಿನ ದಾಳಿ ಪಾಕಿಸ್ತಾನದಲ್ಲಿ ತೀವ್ರ ರೀತಿಯಲ್ಲಿ ಹೆಚ್ಚುತ್ತಿದ್ದು, ಎರಡು ದಿನಗಳ ಹಿಂದೆಯಷ್ಟೇ ಫೈಸಲ್‌ಬಾದ್‌ನ ಜರನ್‌ವಾಲಾದಲ್ಲಿ ಐದು ಚರ್ಚ್‌ಗಳನ್ನು ಧ್ವಂಸಗೊಳಿಸಲಾಗಿತ್ತು. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ೧೦೦ಕ್ಕೂ ಅಧಿಕ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕುರಾನ್‌ನ ಪ್ರತಿಗೆ ಹಾನಿ ಮಾಡಲಾಗಿದೆ ಎಂದು ಆರೋಪಿಸಿ, ಮುಸ್ಲಿಂ ದುಷ್ಕರ್ಮಿಗಳ ಗುಂಪೊಂದು ಜರನ್‌ವಾಲಾದಲ್ಲಿ ದಾಂಧಲೆ ನಡೆಸಿ, ಐದು ಚರ್ಚ್ ಸೇರಿದಂತೆ ಕ್ರೈಸ್ತ ಸಮುದಾಯಕ್ಕೆ ಸೇರಿದ ೧೨ಕ್ಕೂ ಕಟ್ಟಡಗಳನ್ನು ಧ್ವಂಸ ಮಾಡಿದ್ದರು. ಸದ್ಯ ಜರನ್‌ವಾಲಾ ಸೇರಿದಂತೆ ಇಡೀ ಫೈಸಲ್‌ಬಾದ್‌ನಲ್ಲಿ ಸಾರ್ವಜನಿಕ ಸಭೆ-ಸಮಾರಂಭಗಳನ್ನು ನಿರ್ಬಂಧಿಸಲಾಗಿದೆ. ಸದ್ಯ ಕುರಾನ್‌ಗೆ ಹಾನಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರೈಸ್ತ ಸಮುದಾಯದ ಇಬ್ಬರ ವಿರುದ್ಧ ಧರ್ಮನಿಂದನೆ ಪ್ರಕರಣ ದಾಖಲಿಸಲಾಗಿದೆ. ಇನ್ನು ಇತ್ತೀಚಿಗಿನ ದಿನಗಳಲ್ಲಿ ಧರ್ಮನಿಂದನೆ ಪ್ರಕರಣದಲ್ಲಿ ಅಲ್ಪಸಂಖ್ಯಾತ ಧರ್ಮಗಳ ಪ್ರಾರ್ಥನಾಲಯಗಳ ಮೇಲೆ ದಾಳಿ ನಡೆಸುತ್ತಿರುವ ಸಂಗತಿ ಪಾಕಿಸ್ತಾನದಲ್ಲಿ ಹೆಚ್ಚುತಿದೆ. ಇದಕ್ಕೆ ಸಂಬಂಧಿಸಿದಂತೆ ಹಲವು ದೇವಸ್ಥಾನಗಳ ಮೇಲೆ ಇಲ್ಲಿ ದಾಳಿ ನಡೆಸಲಾಗಿದ್ದು, ಇದೀಗ ಚರ್ಚ್‌ಗಳ ಮೇಲೆ ಕೂಡ ದಾಳಿ ಮುಂದುವರೆಸಲಾಗಿದೆ.