ಚರ್ಚೆ ಹುಟ್ಟುಹಾಕಿದ ಶಿವನಗೌಡ ನಾಯಕ ನಡೆ

*ಮಸ್ಕಿ ಉಪಚುನಾವಣೆಯಿಂದ ಸಂಪೂರ್ಣ ದೂರ *ಶಾಸಕರ ಸಾಮರ್ಥ್ಯ ಬಳಸಿಕೊಳ್ಳದ ಹೈಕಮಾಂಡ್?
ದೇವದುರ್ಗ.ಮೇ.೪-ಮಸ್ಕಿ ಉಪಚುನಾವಣೆ ಪ್ರಚಾರಕ್ಕೆ ಮುಖ್ಯಮಂತ್ರಿ ಆದಿಯಾಗಿ ಘಟಾನುಘಟಿ ನಾಯಕರು ಬಂದರೂ ಬಿಜೆಪಿ ಅಭ್ಯರ್ಥಿಯ ಭಾರಿ ಅಂತರದ ಸೋಲು ಚರ್ಚೆ ಹುಟ್ಟುಹಾಕಿದೆ. ಕಾಕತಾಳಿಯ ಎನ್ನುವಂತೆ ಶಾಸಕ ಕೆ ಶಿವನಗೌಡ ನಾಯಕ ಉಪಚುನಾವಣೆಯಿಂದ ದೂರ ಉಳಿದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಜಿಲ್ಲೆಯ ಬಿಜೆಪಿ ಪ್ರಭಾವಿ ನಾಯಕ ಎಂದೇ ಗುರುತಿಸಿಕೊಂಡ ಶಿವನಗೌಡ ನಾಯಕ, ಪಕ್ಷದಲ್ಲಿ ತನ್ನದೇ ಆದ ವರ್ಚಸ್ಸು, ಪ್ರಭಾವ, ಅಭಿಮಾನಿಗಳು ಹಾಗೂ ಬೆಂಬಲಿಗರನ್ನು ಹೊಂದಿದ್ದಾರೆ. ಸುಮಾರು ಒಂದೂವರೆ ತಿಂಗಳು ನಡೆದ ಚುನಾವಣೆ ಪ್ರಚಾರದಲ್ಲಿ, ಶಾಸಕ ಶಿವನಗೌಡ ನಾಯಕ್ ಒಂದು ದಿನವೂ ಮಸ್ಕಿ ಕ್ಷೇತ್ರದಲ್ಲಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದರೂ, ಜಿಲ್ಲೆಯಲ್ಲಿ ಇಬ್ಬರೇ ಕಮಲ ಶಾಸಕರಿದ್ದಾರೆ. ಅದರಲ್ಲಿ ಶಿವನಗೌಡ ನಾಯಕ, ಪ್ರಭಾವಿ ಎನ್ನುವುದು ಹಲವು ಚುನಾವಣೆಗಳಲ್ಲಿ ಸಾಬೀತುಪಡಿಸಿದ್ದಾರೆ. ಸಚಿವರಾಗಿ, ಮುಖ್ಯಮಂತ್ರಿ ಆಪ್ತ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿದ್ದು, ಜಿಲ್ಲೆಯಲ್ಲಿ ತಮ್ಮದೇಯಾದ ಮತಬ್ಯಾಂಕ್ ಹೊಂದಿದ್ದಾರೆ.
ಆದರೆ ಮಸ್ಕಿ ಉಪಚುನಾವಣೆಯಿಂದ ದೂರ ಉಳಿದಿರುವುದು ಯಾಕೆ ಎನ್ನುವುದು ಜಿಲ್ಲೆಯಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ. ಪ್ರಚಾರಕ್ಕೆ ಸಚಿವರು ಸೇರಿ ಅಕ್ಕಪಕ್ಕದ ಜಿಲ್ಲೆಯ ಬಿಜೆಪಿ ಶಾಸಕರು, ಸಂಸದರು ಬಂದಿದ್ದರು. ಶಿವನಗೌಡ ನಾಯಕರನ್ನು ಹೈಕಮಾಂಡ್ ಹಾಗೂ ಜಿಲ್ಲಾ ಬಿಜೆಪಿ ನಾಯಕರು ಕರೆಯಲಿಲ್ಲವೋ, ಅಥವಾ ಇವರೇ ಪ್ರಚಾರದಿಂದ ದೂರ ಉಳಿದರೋ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ. ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾಗಿರುವ ಶಿವನಗೌಡ ನಾಯಕ, ರಾಜ್ಯ ಸರ್ಕಾರದಲ್ಲಿ ತನ್ನದೇ ಆದ ಪ್ರಭಾವ ಹೊಂದಿದ್ದಾರೆ. ಅರಕೆರಾ ಹೊಸ ತಾಲೂಕು ರಚನೆಗೆ ಸಚಿವ ಸಂಪುಟದ ಒಪ್ಪಿಗೆ ಸೇರಿ, ಜಿಲ್ಲೆಯಲ್ಲಿ ಅತಿ ಹೆಚ್ಚು ಸಾವಿರು ಕೋಟಿ ರೂ ಅನುದಾನ ಕ್ಷೇತ್ರಕ್ಕೆ ತಂದಿದ್ದಾರೆ. ಆದರೂ, ಪ್ರಚಾರದಿಂದ ದೂರ ಉಳಿಯುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರಾ ಎನ್ನುವ ಪ್ರಶ್ನೆ ಮೂಡಿದೆ. ಈ ಭಾಗದಲ್ಲಿ, ರಾಜುಗೌಡ ಹಾಗೂ ಶಿವನಗೌಡ ಬಿಜೆಪಿಗೆ ಜೋಡೆತ್ತು ಎಂದು ಸಮುದಾಯದ ನಾಯಕರು ಮಾತ್ರವಲ್ಲ, ಬಿಜೆಪಿ ಕೂಡ ಒಪ್ಪಿಕೊಂಡಿದೆ. ಯಾದಗಿರಿಯಲ್ಲಿ ನಡೆಯುವ ಪ್ರತಿಯೊಂದು ಚುನಾವಣೆಗೆ ಶಿವನಗೌಡ ನಾಯಕ, ರಾಯಚೂರಿನಲ್ಲಿ ನಡೆಯುವ ಚುನಾವಣೆಗೆ ರಾಜುಗೌಡ ನಾಯಕ ಜೋಡಿಯಾಗಿ ಪ್ರಚಾರ ನಡೆಸಿದ್ದಾರೆ. ಆದರೆ ಮಸ್ಕಿ ಉಪಚುನಾವಣೆಯಿಂದ ದೂರ ಉಳಿದಿರುವುದು, ಅವರು ಬಿಜೆಪಿಯಿಂದ ದೂರವಾಗುತ್ತಾರಾ ಎನ್ನುವ ಅನುಮಾನ ಮೂಡಿದೆ.
ಜಿಲ್ಲೆಯ ಪ್ರಭಾವಿ ನಾಯಕ
ಶಿವನಗೌಡ ನಾಯಕ ಜಿಲ್ಲೆಯ ಬಿಜೆಪಿ ಪ್ರಭಾವಿ ನಾಯಕ. ಜಿಲ್ಲೆಯಲ್ಲಿ ಬಿಜೆಪಿ ಬೆಳವಣಿಗೆಯಲ್ಲಿ ತಮ್ಮದೇಯಾದ ಪಾತ್ರ ನಿರ್ವಹಿಸಿದ್ದಾರೆ. ೨೦೧೧ರಲ್ಲಿ ಬಿಜೆಪಿಯೊಂದಿಗೆ ವೈಮನಸ್ಸು ಉಂಟಾದಾಗ ತಾಲೂಕಿನ ಎಲ್ಲಾ ೭ ಜಿಪಂ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿಗಳನ್ನು ನಿಲ್ಲಿಸಿ ಗೆಲ್ಲಿಸಿದ್ದರು. ೨೦೧೩ರಲ್ಲಿ ನಡೆದ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ರಾಯಚೂರು ಗ್ರಾಮೀಣ ಕ್ಷೇತ್ರಕ್ಕೆ ತಿಪ್ಪರಾಜು ಹವಾಲ್ದಾರಗೆ ಬಿಜೆಪಿ ಟಿಕೆಟ್ ಕೊಡಿಸಿ, ಗೆಲ್ಲಿಸಿಕೊಂಡು ಬಂದಿದ್ದರು. ೨೦೧೭ರಲ್ಲಿ ವೆಂಕಟೇಶ್ ನಾಯಕ ಅಕಾಲಿಕ ನಿಧನದಿಂದ ತೆರವಾದ ದೇವದುರ್ಗ ವಿಧಾನಸಭಾ ಉಪಚುನಾವಣೆಯಲ್ಲಿ ಒಬ್ಬಂಟಿಯಾಗಿ ಗೆಲುವು ಸಾಧಿಸಿದ್ದರು. ಅಂದಿನ ಸಿದ್ದರಾಮಯ್ಯ ಸರ್ಕಾರ ಕ್ಷೇತ್ರಕ್ಕೆ ಸಾವಿರಾರು ಕೋಟಿ ಅನುದಾನ ನೀಡಿ, ದೇವದುರ್ಗದಲ್ಲಿ ಬೀಡುಬಿಟ್ಟಿತ್ತು. ಸರ್ಕಾರದ ಪ್ರಭಾವ ಮೀರಿ ಅಂದು ಗೆಲುವು ಸಾಧಿಸಿದ್ದರು. ಸಂಸದ ರಾಜಾ ಅಮರೇಶ್ ನಾಯಕಗೆ ೨೦೧೯ರ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಕೊಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಜಿಲ್ಲೆಯ ಬಿಜೆಪಿಯಲ್ಲಿ ಶಿವನಗೌಡ ನಾಯಕ್ ತಮ್ಮದೇ ಆದ ಹಿಡಿತ ಹೊಂದಿದ್ದಾರೆ.
ಕೋಟ್…..
ಅನಾರೋಗ್ಯ ಹಾಗೂ ವೈಯಕ್ತಿಕ ಕಾರಣದಿಂದ ನಾನು ಮಸ್ಕಿ ಕ್ಷೇತ್ರದ ಉಪಚುನಾವಣೆಯಿಂದ ದೂರ ಉಳಿದಿದ್ದೆ. ಹೈಕಮಾಂಡ್ ಜೊತೆ ಯಾವುದೇ ಮನಸ್ತಾಪವಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ದೇವದುರ್ಗ ಕ್ಷೇತ್ರಕ್ಕೆ ಸಾವಿರಾರು ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ. ಹೀಗಾಗಿ ಪಕ್ಷ ಬಿಡುವ ಪ್ರಶ್ನೆ ಬರುವುದಿಲ್ಲ.