ಚರ್ಚೆಗೆ ಎಬಿವಿಪಿ ಕಾರ್ಯಕರ್ತರಿಗೆ ಆರಗ ಆಹ್ವಾನ

ಶಿವಮೊಗ್ಗ , ಜು. ೩೦-ಶಿವಮೊಗ್ಗದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಮನೆಯಲ್ಲಿ ನನ್ನನ್ನು ಭೇಟಿಯಾಗಲು ಬಂದಿದ್ದ ಎಬಿವಿಪಿ ಕಾರ್ಯಕರ್ತರು ನನ್ನ ಅನುಪಸ್ಥಿತಿಯಲ್ಲಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ ಎಂದು ಎಬಿವಿಪಿ ಕಾರ್ಯಕರ್ತರ ಪ್ರತಿಭಟನೆಯನ್ನು ಸಮರ್ಥಿಸಿಕೊಂಡರು.
ಪ್ರತಿಭಟನೆ ನಡೆಸಿರುವ ಎಬಿವಿಪಿ ಕಾರ್ಯಕರ್ತರನ್ನು ನಾನೇ ಆಹ್ವಾನಿಸಿ ಅವರ ಜತೆ ಮಾತನಾಡುತ್ತೇನೆ ಎಂದೂ ಅವರು ಹೇಳಿದರು. ಸೈದ್ಧ್ಯಾಂತಿಕವಾಗಿ ನಾವೆಲ್ಲರೂ ಒಂದಾಗಿ ಇದ್ದೇವೆ. ಕಾರ್ಯಕರ್ತನನ್ನು ಕಳೆದುಕೊಂಡಾಗ ಇಂತಹ ಆಕ್ರೋಶ ಸಹಜ ಎಂದು ಅವರು ಹೇಳಿದರು.
ತಾರತಮ್ಯವಿಲ್ಲ
ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಹಾಗೂ ಸೂರತ್ಕಲ್‌ನ ಮೊಹ್ಮದ್ ಫಾಜಿಲ್ ಕೊಲೆಗಳ ತನಿಖೆ ವಿಚಾರದಲ್ಲಿ ಸರ್ಕಾರ ಯಾವುದೇ ತಾರತಮ್ಯ ಮಾಡುತ್ತಿಲ್ಲ. ವಿರೋಧ ಪಕ್ಷಗಳ ಆರೋಪಗಳಲ್ಲಿ ಹುರುಳಿಲ್ಲ ಎಂದರು.
ಪ್ರವೀಣ್ ಕೊಲೆ ಪ್ರಕರಣದ ಆರೋಪಿಗಳಿಗೆ ಕೇರಳದ ನಂಟು ಇದೆ. ಹೀಗಾಗಿ, ಎನ್‌ಐಎಗೆ ತನಿಖೆಯನ್ನು ಒಪ್ಪಿಸಿದ್ದೇವೆ. ಫಾಜಿಲ್ ಪ್ರಕರಣದ ತನಿಖೆ ಪ್ರಾಥಮಿಕ ಹಂತದಲ್ಲಿದೆ. ಹಿನ್ನೆಲೆ ಅರಿಯದೆ ಎನ್‌ಐಗೆ ಕೊಡಲು ಸಾಧ್ಯವಿಲ್ಲ ಎಂದರು.
ಸಾವಿಗೆ ಸಾವು ಪರಿಹಾರ ಎಂಬುದು ನಮ್ಮ ನಂಬಿಕೆ ಅಲ್ಲ. ಯಾವುದೇ ವ್ಯಕ್ತಿ ಸತ್ತಾಗ ಮಾನಸಿಕವಾಗಿ ಹಾಗೆ ಅನಿಸುತ್ತದೆ. ಅದು ಸಹಜ, ಪ್ರಾಣ ತೆಗೆಯುವುದು, ರಕ್ತ ಹರಿಸುವುದು ಹುಡುಕಾಟಿಕೆಯ ಮಾತಲ್ಲ, ಇದನ್ನೆಲ್ಲ ನಾವು ನಿಲ್ಲಿಸುತ್ತೇವೆ ಎಂದರು.
ಕ್ರಿಯೆ ತಕ್ಕ ಪ್ರತಿಕ್ರಿಯೆ ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಮತಾಂಧ ಶಕ್ತಿಗಳಿಂದ ನಡೆದ ಕೊಲೆ ಪ್ರಕರಣಗಳ ತ್ವರಿತ ವಿಚಾರಣೆಗೆ ನೆರವಾಗಲು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ನ್ನು ನೇಮಕ ಮಾಡುತ್ತಿದ್ದೇವೆ. ನ್ಯಾಯಾಲಯಕ್ಕೂ ತ್ವರಿತ ವಿಚಾರಣೆಗೆ ಮನವಿ ಮಾಡುತ್ತೇವೆ ಎಂದರು.
ಮಂಗಳೂರು ಈಗ ಶಾಂತವಾಗಿದೆ. ಇನ್ನು ಮುಂದೆ ಯಾರು ಕಾನೂನನ್ನು ಕೈಗೆತ್ತಿಕೊಳ್ಳಲು ಬಿಡುವುದಿಲ್ಲ ಎಂದರು.
ಸಿದ್ದರಾಮಯ್ಯ ಅವರು ಅಧಿಕಾರದಲ್ಲಿದ್ದಾಗ ೫ ವರ್ಷಗಳಲ್ಲಿ ಮತೀಯ ಸಂಘಟನೆಗಳ ೨ ಸಾವಿರ ಪ್ರಕರಣ ಹಿಂದಕ್ಕೆ ಪಡೆದರು. ಅವರನ್ನು ಮತ ಬ್ಯಾಂಕ್‌ಗಾಗಿ ಬಳಸಿಕೊಂಡು ಬೆನ್ನು ತಟ್ಟಿ ಬೆಳೆಸಿದ್ದಾರೆ. ಆ ಪಾಪವನ್ನು ಈಗ ರಾಜ್ಯ ಅನುಭವಿಸುತ್ತಿದೆ ಎಂದು ಸಚಿವ ಅರಗ ಜ್ಞಾನೇಂದ್ರ ಕಿಡಿಕಾರಿದರು.