ಚರಂಡಿ ಹೂಳು ತೆಗೆಯದೆ ಗ್ರಾಮ ಪಂ. ನಿರ್ಲಕ್ಷ

ಹನೂರು: ಏ.18:- ಕೊಂಗರಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಚರಂಡಿ ಹೂಳು ತೆಗೆದು ರಸ್ತೆಯ ಬದಿಯಲ್ಲಿ ಹಾಕಿ ತೆರವು ಮಾಡಿದೆ ಅಲ್ಲೇ ಬಿಟ್ಟಿರುವ ಪರಿಣಾಮ ಮತ್ತೆ ಕಸ ಕಡ್ಡಿ ತ್ಯಾಜ್ಯ ಚರಂಡಿ ಸೇರುತ್ತಿದ್ದು ಇದರಿಂದ ಚರಂಡಿ ಹೂಳು ತುಂಬಿಕೊಂಡರು ಸ್ವಚ್ಚತೆ ಬಗ್ಗೆ ನಿರ್ಲಕ್ಷ ವಹಿಸಿರುವುದಕ್ಕೆ ಗ್ರಾಮ ಪಂಚಾಯತ್ ಆಡಳಿತ ವ್ಯವಸ್ಥೆಯ ನಿರ್ಲಕ್ಷಕ್ಕೆ ಹಿಡಿದ ಕನ್ನಡಿಯಾಗಿದೆ.
ಕೊಳ್ಳೇಗಾಲ ತಾಲೂಕಿನ ಕೊಂಗರಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಮಗೆರೆ ಹೊಸ ಬೀದಿಯಲ್ಲಿ ಚರಂಡಿ ಹೂಳು ತುಂಬಿ ಗಬ್ಬೆದ್ದು ಹೋಗಿದೆ. ಸೊಳ್ಳೆ ಕ್ರಿಮಿ ಕೀಟಗಳ ವಾಸಸ್ಥಾನವಾಗಿ ಮಾರ್ಪಟ್ಟಿದೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.
ಹೊಸಬೀದಿಯಲ್ಲಿ ಕೆಲವು ಕಡೆ ಚರಂಡಿ ಹೂಳು ತುಂಬಿಕೊಂಡು ಮೂರು ದಿನಗಳ ಹಿಂದೆ ಹೂಳು ತೆಗೆದು ಅದನ್ನು ತೆರವು ಮಾಡದೆ ಇರುವುದರಿಂದ ಮತ್ತೆ ತ್ಯಾಜ್ಯ ಚರಂಡಿ ಪಾಲಾಗುತ್ತಿದೆ. ಇದು ಪಂಚಾಯಿತಿ ಆಡಳಿತ ವ್ಯವಸ್ಥೆಗೆ ಪದೆ ಪದೇ ಚರಂಡಿ ಹೂಳು ತೆಗೆಯುವ ಖರ್ಚು ವೆಚ್ಚದ ಮೇಲೆ ಹೊರೆಯಾಗಿದೆ.
ಕೊಂಗರಹಳ್ಳಿ ಕಾಮಗೆರೆ ಗ್ರಾಮದಲ್ಲಿ ಚರಂಡಿ ಹುಳು ತೆಗೆಯುವುದಕ್ಕೆ ವರ್ಷಕ್ಕೊಮ್ಮೆ 80 ಸಾವಿರಕ್ಕೂ ಹೆಚ್ಚು ಬಿಲ್ ಖರ್ಚು ಮಾಡುತ್ತಾರೆ. ಆದರೆ ಅರೆಬರೆ ಚರಂಡಿ ಹೂಳು ತೆಗೆದು ಅದನ್ನು ಸರಿಯಾಗಿ ತೆರವು ಮಾಡಲು ತಡ ಮಾಡುವುದರಿಂದ ಮತ್ತೆ ಅದು ಚರಂಡಿ ಸೇರುತ್ತದೆ.
ಚರಂಡಿಗಳು ಮತ್ತೆ ಮತ್ತೆ ತುಂಬಿಕೊಂಡು ಸಾರ್ವಜನಿಕರು ಶಾಪ ಹಾಕುತ್ತಿದ್ದರು. ದೂರು ನೀಡಿದ್ದರು ಪಂಚಾಯತಿ ಆಡಳಿತ ವ್ಯವಸ್ಥೆ ಮಾತ್ರ ಸರಿಯಾಗಿ ಚರಂಡಿಗಳ ಹೂಳು ತೆಗೆಸಿ ಸ್ವಚ್ಛತೆ ಬಗ್ಗೆ ಗಮನ ಹರಿಸದಿರುವುದರ ಬಗ್ಗೆ ಬಗೆಹರಿಸಲು ಸ್ಪಂದಿಸದೆ ನಿರ್ಲಕ್ಷ್ಯ ತೋರಿದ್ದಾರೆ ಎಂಬುದು ಸ್ಥಳೀಯ ಆರೋಪವಾಗಿದೆ.