ಚರಂಡಿ ಕಾಮಗಾರಿ ನೆಪದಲ್ಲಿ ರಸ್ತೆ ಅದ್ವಾನ: ಗ್ರಾಮಸ್ಥರ ಆಕ್ರೋಶ

ತುರುವೇಕೆರೆ, ಆ. ೫- ತಾಲ್ಲೂಕಿನ ದಂಡಿನಶಿವರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅರಕೆರೆ ಗ್ರಾಮದ ಮುಖ್ಯ ಸಂಪರ್ಕ ರಸ್ತೆ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಬೇಜವಾಬ್ದಾರಿತನಕ್ಕೆ ಒಳಗಾಗಿ ಸಾರ್ವಜನಿಕರು ಸಂಚರಿಸದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಲ್ಲೂಕಿನ ದಂಡಿನಶಿವರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅರಕೆರೆ ಗ್ರಾಮದಲ್ಲಿ ಬಾಕ್ಸ್ ಚರಂಡಿ ಮಾಡುವ ನೆಪದಲ್ಲಿ ರಸ್ತೆಯನ್ನು ಸಾರ್ವಜನಿಕರು ಓಡಾಡದಂತೆ ಹಾಳು ಮಾಡಲಾಗಿದೆ.
ನರೇಗಾ ಯೋಜನೆಯಡಿ ಬಾಕ್ಸ್ ಚರಂಡಿ ಕಾಮಗಾರಿ ಕೈಗೊಂಡಿದ್ದು, ಇದು ಸಂಪೂರ್ಣ ಕಳಪೆ ಕಾಮಗಾರಿಯಾಗಿದೆ. ಚರಂಡಿ ಮಾಡುವ ಭರದಲ್ಲಿ ಇರುವ ರಸ್ತೆಯನ್ನು ಸಂಪೂರ್ಣ ಹದಗೆಡಿಸಲಾಗಿದೆ. ರಸ್ತೆಯ ಮಧ್ಯೆ ಭಾಗದಲ್ಲಿ ಅಗೆದು ಸಿಮೆಂಟ್ ಪೈಪ್ ಹಾಕಲಾಗಿತ್ತು. ಈ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಗ್ರಾಮಸ್ಥರು ಊರಿನ ಒಳಗೆ ಮತ್ತು ಹೊರಗೆ ಹೋಗಲು ಹೆಣಗಾಡುವಂತಾಗಿದೆ.
ಈ ಕಳಪೆ ಕಾಮಗಾರಿ, ರಸ್ತೆ ಅದ್ವಾನದ ಬಗ್ಗೆ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶಿವರಾಜು ಮತ್ತು ಇಂಜಿನಿಯರ್ ಲೋಕೇಶ್ ಹಾಗೂ ತುರುವೇಕೆರೆ ತಾ.ಪಂ. ಇ.ಓ. ಸತೀಶ್ ರವರಿಗೆ ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಮಾತ್ರ ಸ್ಪಂದಿಸುತ್ತಿಲ್ಲ.
ಲಂಚದ ಹಣಕ್ಕೆ ಆಸೆ ಬಿದ್ದು ಕಳಪೆ ಕಾಮಗಾರಿಗೆ ಬಿಲ್ ಪಾವತಿ ಮಾಡಿದ್ದಾರೆ ಎಂದು ಆರೋಪಿಸಿರುವ ಗ್ರಾಮಸ್ಥರು ಗುತ್ತಿಗೆದಾರರು ಮತ್ತು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಇಬ್ಬರು ಸಂಬಂಧಿಕರು ಎಂದು ಹೇಳಲಾಗುತ್ತಿದೆ ಎಂದಿದ್ದಾರೆ.
ನಮ್ಮ ಮನವಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಮೇಲಾಧಿಕಾರಿಗಳನ್ನು ಒತ್ತಾಯಿದ್ದಾರೆ.