ಚಪ್ಪಲಿ ಒಳಭಾಗದಲ್ಲಿ ಚಿನ್ನ ಬಚ್ಚಿಟ್ಟು ಸಾಗಾಣೆ ಖದೀಮನ ಸೆರೆ

ಬೆಂಗಳೂರು,ಮಾ.15-ಚಪ್ಪಲಿಯ ಒಳಭಾಗದಲ್ಲಿ ಚಿನ್ನ ಬಚ್ಚಿಟ್ಟುಕೊಂಡು ಸಾಗಿಸುತ್ತಿದ್ದ ಆರೋಪಿಯನ್ನು ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್‌ ಅಧಿಕಾರಿಗಳು ಬಂಧಿಸುವಲ್ಲಿ‌ ಯಶಸ್ವಿಯಾಗಿದ್ದಾರೆ.
ಬಂಧಿತನಿಂದ 69.40 ಲಕ್ಷ ಮೌಲ್ಯದ 1 ಕೆ.ಜಿ 205 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡು‌ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ.
ಪ್ರಯಾಣಿಕನ ಪೂರ್ವ ಅಪರಾಧಿಕ ಮಾಹಿತಿ ಆಧಾರದ ಮೇಲೆ ನಿಲ್ದಾಣದ ಕಸ್ಟಮ್ಸ್‌ ಅಧಿಕಾರಿಗಳು ತೀವ್ರ ತಪಾಸಣೆ ಮಾಡಿದಾಗ ಆತನ ಚಪ್ಪಲಿಯ ತಳಭಾಗದಲ್ಲಿ ಚಿನ್ನ ಬಚ್ಚಿಟ್ಟುಕೊಂಡು ಕಳ್ಳ ಸಾಗಣೆ ಮಾಡುತ್ತಿರುವುದು ಕಂಡುಬಂದಿದೆ.
ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಬಂದಿದ್ದ ಆರೋಪಿಯು ಸುಲಭವಾಗಿ ಅಧಿಕಾರಿಗಳ ಕಣ್ತಪ್ಪಿಸುವ ಉದ್ದೇಶದಿಂದ ಚಿನ್ನವನ್ನು ಸಣ್ಣ ಸಣ್ಣ ತುಂಡುಗಳನ್ನಾಗಿಸಿ ಮಾಡಿ ಚಪ್ಪಲಿಯಲ್ಲಿ ಇರಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.