ಚಪ್ಪಲಿಯಿಂದ ಹೊಡೆದುಕೊಂಡ ಕೌನ್ಸಿಲರ್

ಅಮರಾವತಿ,ಆ.೧-ಮತದಾರರಿಗೆ ನೀಡಿದ ಭರವಸೆಗಳನ್ನು ಈಡೇರಿಸದ ಕಾರಣಕ್ಕೆ ಅನಕಪಲ್ಲಿ ಜಿಲ್ಲೆಯ ಕೌನ್ಸಿಲರ್‌ಯೊಬ್ಬರು ತನ್ನ ಚಪ್ಪಲಿಯಿಂದ ಹೊಡೆದುಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನರಸೀಪಟ್ಟಣ ಪುರಸಭೆಯ ಕೌನ್ಸಿಲರ್ ಮುಲಪರ್ತಿ ರಾಮರಾಜು ಕೌನ್ಸಿಲ್ ಸಭೆಯಲ್ಲಿ, ಪಾಲಿಕೆ ಸದಸ್ಯನಾಗಿ ಆಯ್ಕೆಯಾಗಿ ೩೧ ತಿಂಗಳು ಕಳೆದರೂ ನನ್ನ ವಾರ್ಡ್‌ನಲ್ಲಿನ ಒಳಚರಂಡಿ, ವಿದ್ಯುತ್, ನೈರ್ಮಲ್ಯ, ರಸ್ತೆ ಮತ್ತಿತರ ನಾಗರಿಕ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ಅಳಲು ತೋಡಿಕೊಂಡರು.

ಆಟೋರಿಕ್ಷಾ ಓಡಿಸುವ ಮೂಲಕ ಜೀವನ ಸಾಗಿಸುತ್ತಿರುವ ೪೦ ವರ್ಷ ವಯಸ್ಸಿನ ಕೌನ್ಸಿಲರ್ ಅವರು ಮತದಾರರಿಗೆ ನೀಡಿದ ಭರವಸೆಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಹೇಳಿಕೊಂಡು ಅಸಮಧಾನಗೊಂಡರು.

ಸ್ಥಳೀಯ ಪುರಸಭೆ ಅಧಿಕಾರಿಗಳು ೨೦ನೇ ವಾರ್ಡ್ ಅನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ ಎಂದು ಅವರು ಆರೋಪಿಸಿದರು.