ಚಪ್ಪರದಹಳ್ಳಿಯಲ್ಲಿ ಓಕುಳಿ ಹಬ್ಬದ ಸಂಭ್ರಮ

ಬೆಟ್ಟದಪುರ: ಮೇ.17:- ಸಮೀಪದ ಚಪ್ಪರದಹಳ್ಳಿ ಗ್ರಾಮದಲ್ಲಿ ಮಂಗಳವಾರ ಓಕುಳಿ ಹಬ್ಬ ಎಂಟು ವರ್ಷದ ಬಳಿಕ ಅದ್ದೂರಿಯಾಗಿ ನಡೆಯಿತು.
ಓಕುಳಿ ಹಬ್ಬದ ಹಿನ್ನಲೆ ಶ್ರೀ ದೊಡ್ಡಮ್ಮ ಚಿಕ್ಕಮ್ಮ ತಾಯಿ ತೇರು ವಿಜೃಂಭಣೆಯಿಂದ ನೂರಾರು ಭಕ್ತಾಧಿಗಳ ಸಮ್ಮುಖದಲ್ಲಿ ನೆರವೇರಿತು. ಮಂಗಳವಾರ ಬೆಳಿಗ್ಗೆ ಸಲ್ಲಿದ ಶುಭಲಗ್ನದಲ್ಲಿ ಶ್ರೀ ದೊಡ್ಡಮ್ಮ ಮತ್ತು ಚಿಕ್ಕಮ್ಮ ತಾಯಿಯ ಉತ್ಸವ ಮೂರ್ತಿಗಳನ್ನು ವಿಶೇಷವಾಗಿ ಅಲಂಕರಿಸಿ ಪೂಜೆ ಸಲ್ಲಿಸಿ ನಂತರ ಗ್ರಾಮದ ಕುರ್ಜು ಸುತ್ತ ಪ್ರದಕ್ಷಣೆ ಹಾಕಿ ಬಳಿಕ ವಿವಿಧ ಪುಷ್ಪಗಳಿಂದ ಅಲಂಕರಿಸಿದ ರಥದ ಮೇಲೆ ಪ್ರತಿಷ್ಠಾಪಿಸಲಾಯಿತು. ನಂತರ ಭಕ್ತಾಧಿಗಳು ಮತ್ತು ಗ್ರಾಮಸ್ಥರು ಒಟ್ಟಾಗಿ ಸೇರಿ ರಥ ಎಳೆಯುವ ಮೂಲಕ ಇಷ್ಟಾರ್ಥ ಸಿದ್ಧಿಗಾಗಿ ತಾಯಿಯಲ್ಲಿ ಬೇಡಿಕೊಂಡರು. ಕುಣಿದು ಕುಪ್ಪಳಿಸಿದರು,
ಓಕುಳಿ ಹಬ್ಬದ ಹಿನ್ನೆಲೆ ಮಂಗಳವಾರ ನಡೆದ ನೀರಿನ ಓಕುಳಿಯಲ್ಲಿ ಯುವಕರು ಹಾಗೂ ಗ್ರಾಮದ ಮುಖಂಡರು ಸೇರಿದಂತೆ ಹಲವಾರು ಮಂದಿ ಪರಸ್ಪರ ಬಣ್ಣದ ನೀರನ್ನು ಎರಚಾಡಿಕೊಳ್ಳುವ ಹಾಗೂ ತಮಟೆ ಶಬ್ದ ಹಾಗೂ ಚಿತ್ರದ ಹಾಡಿಗೆ ಕುಣಿಯುವ ಮೂಲಕ ಸಂಭ್ರಮಿಸಿದರು. ಹಬ್ಬದ ಹಿನ್ನೆಲೆ ಗ್ರಾಮದ ಪ್ರಮುಖ ವೃತ್ತಗಳಿಗೆ ವಿಶೇಷವಾಗಿ ದೀಪ ಅಲಂಕಾರ ಮಾಡಲಾಯಿತು. ಇದೇ ವೇಳೆ ಮಕ್ಕಳ ಆಟಿಕೆ ಸಾಮಾನು ಮಾರಾಟ ಅಂಗಡಿ ಸೇರಿದಂತೆ ವಿವಿಧ ಬಗೆಯ ಅಂಗಡಿಗಳು ವ್ಯಾಪಾರ ನಡೆಸಿದವು.