ಚನ್ನೈ-ಬೆಂಗಳೂರು ಕಾರಿಡಾರ್‌ನಿಂದ ಉದ್ಯೋಗ ಸೃಷ್ಠಿಗೆ ಅವಕಾಶ

ತುಮಕೂರು, ಜು. ೧೪- ಚೆನ್ನೈ-ಬೆಂಗಳೂರು ಕಾರಿಡಾರ್ ಬಗ್ಗೆ ಕೆಲವು ಕಿಡಿಗೇಡಿಗಳು ರಾಜಕೀಯ ಪ್ರೇರಿತವಾಗಿ ರೈತ ಸಂಘ ಮುಂದಿಟ್ಟುಕೊಂಡು ಹೋರಾಟ ಮಾಡುತ್ತಿದ್ದಾರೆ ಎಂದು ಸಂಸದ ಜಿ.ಎಸ್. ಬಸವರಾಜು ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚೆನ್ನೈ-ಬೆಂಗಳೂರು ಇಂಡಸ್ಟ್ರೀಯಲ್ ಕಾರಿಡಾರ್‌ಗಾಗಿ ಭೂಮಿಯನ್ನು ಗುರುತಿಸಲಾಗಿದೆ, ವಸಂತನರಸಾಪುರ ಇಂಡಸ್ಟ್ರಿಯಲ್ ಎಸ್ಟೇಟ್ ಬಿಟ್ಟರೆ, ಚೆನ್ನೈ-ಬೆಂಗಳೂರು ಕಾರಿಡಾರ್‌ನಿಂದಾಗಿ ಕೈಗಾರಿಕೆ ಸ್ಥಾಪನೆ ಮತ್ತು ಉದ್ಯೋಗ ಸೃಷ್ಠಿಗೆ ಅವಕಾಶ ಸಿಗಲಿದೆ ಎಂದರು.
ಈ ಯೋಜನೆಯಿಂದ ರೈತರಿಗೆ ಯಾವುದೇ ಅನ್ಯಾಯವಾಗುವುದಿಲ್ಲ, ನಾನು ಸಂಸದನಾಗಿ ಇರುವವರೆಗೆ ಅನ್ಯಾಯವಾಗಲು ಬಿಡುವುದಿಲ್ಲ. ಈಗಾಗಲೇ ಪವರ್ ಗ್ರೀಡ್ ಯೋಜನೆ ಹಾಗೂ ಭೀಮಸಂದ್ರ ಕೆರೆಯಿಂದ ತುಮಕೂರು ನಗರದ ಕೊಳಚೆ ನೀರನ್ನು ಶುದ್ಧೀಕರಿಸಿ, ವಸಂತನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಹರಿಸಲು ಯೋಜನೆ ರೂಪಿಸಲಾಗಿದೆ. ಇದರಿಂದ ಕೈಗಾರಿಕೆಗಳಿಗೆ ಅಷ್ಟೇ ಅಲ್ಲದೇ, ಅಂತರ್ಜಲ ಮಟ್ಟ ಹೆಚ್ಚಳವಾಗಲು ಅನುಕೂಲವಾಗಲಿದೆ ಎಂದರು.
ಚೆನ್ನೈ-ಬೆಂಗಳೂರು ಇಂಡಸ್ಟ್ರಿಯಲ್ ಕಾರಿಡಾರ್‌ನ ಐದು ಕೆರೆಗಳಿಗೆ ಕುಡಿಯುವ ನೀರು ಪೂರೈಕೆಗೆ ೧೮೦೦ ಕೋಟಿ ಅನುದಾನದಲ್ಲಿ ಯೋಜನೆ ರೂಪಿಸಲಾಗಿದೆ. ಅದಕ್ಕೆ ೦.೨ ಟಿಎಂಸಿ ನೀರು ನಿಗದಿಯಾಗಿದ್ದು, ಮೂಲಸೌಕರ್ಯಗಳುಳ್ಳ ಚೆನ್ನೈ-ಬೆಂಗಳೂರು ಕೈಗಾರಿಕಾ ಪ್ರದೇಶ ಸ್ಥಾಪನೆಯಿಂದ ಇಡೀ ಭಾರತದಲ್ಲಿ ಅಷ್ಟೇ ಅಲ್ಲದೆ ಪ್ರಪಂಚದಲ್ಲಿಯೇ ಪ್ರಮುಖ ಕೇಂದ್ರವಾಗಲಿದೆ ಎಂದರು.
ಚೆನ್ನೈ-ಬೆಂಗಳೂರು ಕಾರಿಡಾರ್‌ಗೆ ಗುರುತಿಸಿರುವ ಭೂಮಿಯಲ್ಲಿ ಈ ಹಿಂದೆ ಒಂದು ಮೂಟೆ ರಾಗಿಯನ್ನು ಬೆಳೆಯುತ್ತಿರಲಿಲ್ಲ. ಈಗ ಕೈಗಾರಿಕಾ ಪ್ರದೇಶಕ್ಕೆ ಭೂ ಸ್ವಾಧೀನವಾಗುತ್ತಿರುವುದರಿಂದ ರೈತರಿಗೆ ಒಳ್ಳೆಯ ಪರಿಹಾರ ದೊರೆಯುತ್ತಿದೆ. ರಾಜಕೀಯಕ್ಕಾಗಿ ಯೋಜನೆ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ರೈತರಿಗೆ ಅನ್ಯಾಯವಾಗಲಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಆದರೆ ಇದು ರೈತರಿಗೆ ಉಪಯುಕ್ತವಾಗುತ್ತಿದೆ ಎಂದರು.
ಮೇಕ್ ಇನ್ ಇಂಡಿಯಾ ಯೋಜನೆಗೆ ಅಡಿಗಲ್ಲು ವಸಂತನರಸಾಪುರ ಕೈಗಾರಿಕಾ ಪ್ರದೇಶ, ಈಗ ಚೆನ್ನೈ-ಬೆಂಗಳೂರು ಕಾರಿಡಾರ್‌ನಿಂದ ಅನುಕೂಲವಾಗಲಿದೆಯೇ ಹೊರತು ನಷ್ಟವಾಗುವುದಿಲ್ಲ ಎಂದರು. ದಾವಣಗೆರೆ-ತುಮಕೂರು ಮತ್ತು ರಾಯದುರ್ಗ- ತುಮಕೂರು ಮಾರ್ಗಗಳ ರೈಲ್ವೆ ನಿಲ್ದಾಣವು ಕೈಗಾರಿಕಾ ಪ್ರದೇಶದೊಳಗೆ ಹಾದು ಹೋಗಲಿದೆ. ಮುಂದಿನ ದಿನಗಳಲ್ಲಿ ಈ ಪ್ರದೇಶದಲ್ಲಿಯೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಜಾಗ ಗುರುತಿಸಲಾಗುವುದು ಎಂದರು.
ಮೆಟ್ರೋ ರೈಲ್ವೆ ಯೋಜನೆ ಡಾಬಸ್ ಪೇಟೆವರೆಗೂ ವಿಸ್ತರಣೆಯಾಗಿದ್ದು, ಮುಂದಿನ ದಿನಗಳಲ್ಲಿ ತುಮಕೂರು ನಗರ ಹಾಗೂ ವಸಂತ ನರಸಾಪುರ ಕೈಗಾರಿಕಾ ಪ್ರದೇಶದವರೆಗೆ ವಿಸ್ತರಣೆಯಾಗಲಿದ್ದು, ತುಮಕೂರು ಮತ್ತಷ್ಟು ಅಭಿವೃದ್ಧಿಯಾಗಲಿದೆ ಎಂದು ಹೇಳಿದರು.
ಗುಬ್ಬಿ, ಸಿರಾ, ತುಮಕೂರು ತಾಲ್ಲೂಕುಗಳಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪನೆಯಾಗುತ್ತಿರುವುದರಿಂದ ಅಭಿವೃದ್ಧಿ ಹೆಚ್ಚಾಗಿದ್ದು, ಗುಬ್ಬಿ ತಾಲ್ಲೂಕಿನಲ್ಲಿ ರಕ್ಷಣಾ ಘಟಕಗಳ ಸಹ ಉತ್ಪನ್ನಗಳ ತಯಾರಿಕಾ ಘಟಕಗಳ ಸ್ಥಾಪನೆಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದ ಅವರು, ಎಚ್‌ಎಎಲ್ ಗೆ ಅವಶ್ಯಕವಿರುವ ೧೨೦೦ಎಕರೆ ಭೂಮಿಯನ್ನು ಸಿರಾ ತಾಲ್ಲೂಕಿನಲ್ಲಿ ನೀಡಲಾಗುವುದು ಎಂದು ಹೇಳಿದರು.
ಚೆನ್ನೈ-ಬೆಂಗಳೂರು ಕಾರಿಡಾರ್ ಪ್ರಾಧಿಕಾರದ ಆಯುಕ್ತ ಹರ್ಷ ಮಾತನಾಡಿ, ಈ ಯೋಜನೆಯಡಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವುದಾಗಲಿ, ಹಳ್ಳಿಗಳನ್ನು ಸ್ಥಳಾಂತರ ಮಾಡುವುದಾಗಲಿ ಮಾಡುವುದಿಲ್ಲ, ಈ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದ್ದು, ಚೆನ್ನೈ-ಬೆಂಗಳೂರು ಕಾರಿಡಾರ್ ವ್ಯಾಪ್ತಿಯಲ್ಲಿ ನಿರ್ಮಾಣ ಮತ್ತು ಇತರೆ ಉದ್ದೇಶಗಳಿಗೆ ಅನುಮತಿ ನೀಡುವುದು ಹಾಗೂ ಈ ವ್ಯಾಪ್ತಿಯಲ್ಲಿ ಮಹಾಯೋಜನೆಯನ್ನು ರೂಪಿಸಲು ಮಾತ್ರ ಈ ಪ್ರಾಧಿಕಾರ ರಚನೆಯಾಗಿದೆ ಎಂದರು.
ಈ ಯೋಜನೆ ವ್ಯಾಪ್ತಿಯಲ್ಲಿರುವ ೧೨೩ ಹಳ್ಳಿಗಳಲ್ಲಿ ಕಳ್ಳಂಬೆಳ್ಳ ಹೋಬಳಿಯ ೦೫, ಬೆಳ್ಳಾವಿ ಹೋಬಳಿಯ ೧೧, ಕೋರ ಹೋಬಳಿಯ ೧೩ ಹಳ್ಳಿಗಳು ಸೇರಿ ೨೯ ಹಳ್ಳಿಗಳಲ್ಲಿ ಮಾತ್ರ ಭೂ ಸ್ವಾಧೀನ ನಡೆಯಲಿದ್ದು, ಉಳಿದ ಹಳ್ಳಿಗಳು ಈ ಪ್ರಾಧಿಕಾರದ ವ್ಯಾಪ್ತಿಗೆ ಒಳಪಟ್ಟಿದ್ದು, ಮುಂದಿನ ೪೦ ವರ್ಷಗಳಿಗೆ ತಕ್ಕಂತೆ ಮಹಾಯೋಜನೆಯನ್ನು ಇಲ್ಲಿ ರೂಪಿಸಲಾಗುವುದು ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್, ಬಿಜೆಪಿ ಜಿಲ್ಲಾಧ್ಯಕ್ಷ ರವಿ ಹೆಬ್ಬಾಕ ಮತ್ತಿತರರು ಉಪಸ್ಥಿತರಿದ್ದರು.