ಚನ್ನಸಾಗರ ನೆರೆ ಸಂತ್ರಸ್ತರಿಗೆ ಫುಡ್‌ಕಿಟ್ ವಿತರಣೆ

ಮಧುಗಿರಿ, ಆ. ೬- ಕ್ಷೇತ್ರದಲ್ಲಿ ಉತ್ತಮ ಮಳೆಯಾಗಿ ಕೆರೆ-ಕುಂಟೆಗಳು ತುಂಬುವುದರ ಜತೆಗೆ ನದಿ ತುಂಬಿ ಹರಿಯುತ್ತಿರುವುದು ಒಂದೆಡೆ ಖುಷಿಯ ಸಂಗತಿಯಾದರೇ, ಮತ್ತೊಂದಡೆ ನದಿ ನೀರು ಗ್ರಾಮಗಳಿಗೆ ನುಗ್ಗಿ ಆವಾಂತರ ಸೃಷ್ಠಿ ಮಾಡಿರುವುದು ಆತಂಕದ ಸಂಗತಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ .ಗೌಡ ಕಳವಳ ವ್ಯಕ್ತಪಡಿಸಿದರು.
ಪುರವರ ಹೋಬಳಿಯ ಚನ್ನಸಾಗರದ ಗ್ರಾಮದಲ್ಲಿ ಪ್ರವಾಹದಿಂದಾಗಿರುವ ಅನಾಹುತಗಳನ್ನೆಲ್ಲ ವೀಕ್ಷಿಸಿದ ನಂತರ ಬಿಜೆಪಿ ಮುಖಂಡ ಗಿರೇಗೌಡನಹಳ್ಳಿ ಕೃಷ್ಣಮೂರ್ತಿ ನೆರೆ ಸಂತ್ರಸ್ಥರಿಗೆ ಪಡಿತರ ಕಿಟ್ ವಿತರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹಳೆಯದಾದ ಸೇತುವೆಯ ಮೇಲೆ ಜನದಟ್ಟಣೆ ಇದೆ. ಪೊಲೀಸ್ ಇಲಾಖೆಯವರು ಇಲ್ಲಿ ಜನರ ರಕ್ಷಣೆಗೆ ಬ್ಯಾರಿಕೇಡ್‌ಗಳನ್ಮು ಏರ್ಪಾಡು ಮಾಡಿ ಅನಾಹುತಗಳಾಗದಂತೆ ನಿಗಾ ವಹಿಸಬೇಕು. ಜಿಲ್ಲೆಯಲ್ಲಿ ಇನ್ನೂ ಮೂರ್ನಾಲ್ಕು ದಿನ ಮಳೆ ಮುಂದುವರೆಯುವುದರಿಂದ ಜನ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದು ಸುರಕ್ಷಿತವಾಗಿರಿ, ನಾನು ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿ ಅಗತ್ಯ ಕ್ರಮ ತೆಗೆದುಕೊಳ್ಳಲು ತಿಳಿಸುತ್ತೇನೆ ಎಂದರು.
ನಿವೃತ್ತ ಐಎಎಸ್ ಅಧಿಕಾರಿ ಅನಿಲ್‌ಕುಮಾರ್ ಮಾತನಾಡಿ, ನದಿಯ ಪ್ರವಾಹ ಬೆಳಕಾದ ನಂತರ ಬಂದಿರುವುದರಿಂದ ಹೆಚ್ಚೇನು ಅನಾಹುತ ಸಂಭವಿಸಿಲ್ಲ. ರಾತ್ರಿಯ ವೇಳೆಯಲ್ಲಾಗಿದ್ದರೆ ದನ-ಕರುಗಳ, ಮನುಷ್ಯರ ಜೀವ ಹಾನಿಯಾಗುವ ಸಂಭವವಿತ್ತು. ಗ್ರಾಮದ ಜನತೆ ಮಳೆಯ ಅಬ್ಬರ ನಿಲ್ಲುವವರೆಗೂ ಸುರಕ್ಷಿತ ಸ್ಥಳಗಳಲ್ಲಿ ಉಳಿದುಕೊಳ್ಳಿ. ದನ-ಕರುಗಳಿಗೆ ತುರ್ತಾಗಿ ಮೇವಿನ ವ್ಯವಸ್ಥೆ ಮಾಡಲು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಳ್ಳತ್ತೇನೆ ಎಂದರು.
ಮುಖಂಡರಾದ ಗಿರೇಗೌಡನಹಳ್ಳಿ ಕೃಷ್ಣಮೂರ್ತಿ ಮಾತನಾಡಿ, ಗ್ರಾಮಗಳು ಜಲಾವೃತ ಆಗಿರುವ ವಿಷಯ ತಿಳಿದ ತಕ್ಷಣ ನಾನು ನದಿ ಪಾತ್ರದ ಗ್ರಾಮಗಳಿಗೆ ಭೇಟಿ ನೀಡಿದಲ್ಲದೆ, ನೆರೆ ಸಂತ್ರಸ್ಥರಿಗೆ ತಿಂಡಿ ಜತೆಗೆ ಆಹಾರದ ಪಟ್ಟಣಗಳ ವ್ಯವಸ್ಥೆ ಮಾಡಿದ್ದೇನೆ. ಜನರನ್ನು ಕಾಳಜಿ ಕೇಂದ್ರಕ್ಕೆ ತೆರಳುವಂತೆ ಮನವಿ ಮಾಡಿಕೊಳ್ಳುತ್ತೇನೆ ಎಂದರು.
ಈ ಸಂದರ್ಭದಲ್ಲಿ ದಾಕ್ಷಾಯಿಣಿ ಕೃಷ್ಣಮೂರ್ತಿ, ಕೊರಟಗೆರೆ ಮಂಡಲ ಅಧ್ಯಕ್ಷ ಪವನ್ ಕುಮಾರ್, ಮಧುಗಿರಿ ಮಂಡಲ ಅಧ್ಯಕ್ಷ ಪಿ.ಎಲ್. ನರಸಿಂಹಮೂರ್ತಿ, ಹುಣಸವಾಡಿ ಗೋಪಾಲರಾವ್, ಚಿತ್ರದುರ್ಗ ಜಿಲ್ಲಾ ಭಾಜಪ ಯುವ ಮೋರ್ಚಾ ಅಧ್ಯಕ್ಷ ಬಿಸಿ. .ಹನುಮಂತೇಗೌಡ, ಕೆ.ಚಿಕ್ಕಣ್ಣ, ಎನ್.ವಿ. ನಂಜುಂಡಾರಾಧ್ಯ, ಶ್ರೀನಿವಾಸಮೂರ್ತಿ, ಗಂಗಾದರ್, ಬ್ಯಾಲ್ಯ ಗೋಪಾಲ್, ರಂಗನಾಥ್, ಹುಣಸವಾಡಿ ಶಿವಾನಂದಶೆಟ್ಟಿ, ಚಂದ್ರಶೇಖರ, ನವೀನ್, ಕೃಷ್ಣಪ್ಪ, ಆರ್.ಟಿ.ಒ ರಾಜಣ್ಣ, ಸುರೇಶ್, ಜಿ.ಎಸ್. ಮುಕ್ಕಣ್ಣಯ್ಯ, ಓಬಳೇಶಪ್ಪ, ಕಾಂತಮ್ಮ ಮತ್ತಿತರರು ಪಾಲ್ಗೊಂಡಿದ್ದರು.