ಚನ್ನಮ್ಮನ ಶೌರ್ಯ ಸಾಹಸ ದೇಶಪ್ರೇಮ ಎಂದೆಂದಿಗೂ ಸ್ಮರಣೀಯ : ಶಾಸಕ ಲಕ್ಷ್ಮಣ ಸವದಿ

ಅಥಣಿ :ಅ.17: ಸ್ವಾತಂತ್ರ್ಯ ಹೋರಾಟದ ಬೆಳ್ಳಿಚುಕ್ಕಿ ಎಂದೇ ಕರೆಯಲ್ಪಡುವ ವೀರರಾಣಿ ಕಿತ್ತೂರು ಚೆನ್ನಮ್ಮ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ಧೈರ್ಯ, ಸಾಹಸ ಮತ್ತು ದೇಶಪ್ರೇಮ ಇಂದಿನ ಯುವಕ, ಯುವತಿಯರಿಗೆ ಪ್ರೇರಣೆಯಾಗಬೇಕು ಎಂದು ಮಾಜಿ ಡಿಸಿಎಂ ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅವರು ಸೋಮವಾರ ಇಲ್ಲಿನ ಸುಕ್ಷೇತ್ರ ಗಚ್ಚಿನ ಮಠದ ಸಭಾಂಗಣದಲ್ಲಿ ಕಿತ್ತೂರು ಉತ್ಸವದ ನಿಮಿತ್ಯ ರಾಜ್ಯದ್ಯಂತ ಸಂಚರಿಸಿ ಬೆಳಗಾವಿ ಜಿಲ್ಲೆಗೆ ಪ್ರಥಮ ಬಾರಿಗೆ ಅಥಣಿ ಮೂಲಕ ಆಗಮಿಸಿದ ವೀರರಾಣಿ ಕಿತ್ತೂರು ಚೆನ್ನಮ್ಮ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು. ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕನ್ನಡ ನಾಡಿನ ಅನೇಕ ಸೇನಾನಿಗಳು, ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಜೀವನವನ್ನೇ ತ್ಯಾಗ ಬಲಿದಾನ ಮಾಡಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ಕನ್ನಡ ನಾಡಿನ ಧೀರ ಮಹಿಳೆ ವೀರರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ನಂತಹ ಅಪ್ರತಿಮ ಹೋರಾಟಗಾರರ ಹೆಸರು ಅಜರಾಮರ. ಅವರ ಸ್ಮರಣೆಯ ಹೆಸರಿನಲ್ಲಿ ರಾಜ್ಯ ಸರ್ಕಾರದಿಂದ ಮೂರು ದಿನಗಳ ಕಾಲ ಕಿತ್ತೂರು ಉತ್ಸವವನ್ನು ಸಂಭ್ರಮ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ. ಈ ಉತ್ಸವದಲ್ಲಿ ನಾಡಿನ ಮೂಲೆ ಮೂಲೆಯಿಂದ ಲಕ್ಷಾಂತರ ಜನರು ಭಾಗವಹಿಸುತ್ತಾರೆ, ಶ್ರೀ ಮುರುಘೇಂದ್ರ ಶಿವಯೋಗಿಗಳ ಪುಣ್ಯಭೂಮಿಗೆ ಚನ್ನಮ್ಮನ ಜ್ಯೋತಿಯಾತ್ರೆ ಆಗಮಿಸಿರುವುದು ನಮ್ಮೆಲ್ಲರಿಗೂ ಸಂತಸ ಹಾಗೂ ಹೆಮ್ಮೆಯ ಸಂಗತಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮಳ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿದ ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ ಮತ್ತು ಶೆಟ್ಟರ ಮಠದ ಮರುಳಸಿದ್ಧ ಸ್ವಾಮೀಜಿ ಮಾತನಾಡಿದರು. ತಹಶೀಲ್ದಾರ್ ರಾಜೇಶ ಬುರ್ಲಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಕಲ್ಲಾಪುರ, ಅಧಿಕಾರಿಗಳಾದ ಜಿಪಂ ಅಭಿಯಂತರ, ವೀರಣ್ಣ ವಾಲಿ, ಲೋಕೊಪಯೋಗಿ ಇಲಾಖೆಯ ಅಭಿಯಂತರ
ಜೆ. ಎ ಹಿರೇಮಠ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಅಶೋಕ ಕಾಂಬಳೆ, ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿ, ತಾಲೂಕ ವೈದ್ಯಾಧಿಕಾರಿ ಡಾ. ಬಸಗೌಡ ಕಾಗೆ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ವೆಂಕಟೇಶ ಕುಲಕರ್ಣಿ, ಸಣ್ಣ ನೀರಾವರಿ ಇಲಾಖೆಯ ಅಭಿಯಂತರ ಶ್ರೀಕಾಂತ ಮಾಕಾಣಿ, ತಾಲೂಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಮಗೊಂಡ ಪಾಟೀಲ, ಮುಖಂಡರಾದ ರಾಮನಗೌಡ ಪಾಟೀಲ, ಶಿವಪುತ್ರ ಯಾದವಾಡ, ರಾಮಣ್ಣ ಧರಿಗೌಡ, ಜಗನ್ನಾಥ ಬಾಮನೆ, ಅಣ್ಣಾಸಾಬ ತೆಲಸಂಗ, ಉದಯ ಮಾಕಾಣಿ, ನ್ಯಾಯವಾದಿ ಶ್ರೀಕಾಂತ ಪೂಜಾರಿ, ಶಿವಾನಂದ ಗುಡ್ಡಾಪುರ, ಶ್ರೀಶೈಲ ಹಳದಮಳ್ಳ, ಪುರಸಭಾ ಸದಸ್ಯ ರಾಜಶೇಖರ ಗುಡೊಡಗಿ, ಮಲ್ಲೇಶ ಹುದ್ದಾರ, ಸೇರಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಕನ್ನಡಪರ ಸಂಘಟನೆಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಸುಕ್ಷೇತ್ರ ಗಚ್ಚಿನಮಠದಿಂದ ಆರಂಭವಾದ ಮೆರವಣಿಗೆ ಮುಖ್ಯಬೀದಿಯ ಮೂಲಕ ಹಾಯ್ದು ಪಟ್ಟಣದ ವೀರರಾಣಿ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ತಾಲೂಕಾ ಆಡಳಿತದಿಂದ ಪೂಜಿ ಸಲ್ಲಿಸಿ ಶಿವಯೋಗಿ ವೃತ್ತ, ಬಸವೇಶ್ವರ ವೃತ್ತ ಮತ್ತು ಛತ್ರಪತಿ ಶಿವಾಜಿ ವ್ರತದ ಮೂಲಕ ವೀರಜೋತಿ ರಥ ಯಾತ್ರೆಯನ್ನ ಕಾಗವಾಡ ತಾಲೂಕಿಗೆ ಬೀಳ್ಕೊಡಲಾಯಿತು.