ಚನ್ನಬಸವಾನಂದ ಸ್ವಾಮೀಜಿಯವರು ಬಸವ ಧರ್ಮ ಪೀಠದಲ್ಲೇ ಮುಂದುವರೆಯಬೇಕು – ಸುಪ್ರಿಂ ಕೋರ್ಟ್ ಮಹತ್ವದ ಆದೇಶ

ಬೀದರ,ಮೇ.23- ಬಸವ ಧರ್ಮ ಪೀಠ, ವಿಶ್ವಕಲ್ಯಾಣ ಮಿಶನ್ ಮತ್ತು ಬಸವ ಮಹಾಮನೆ ಚಾರಿಟೇಬಲ್ ಟ್ರಸ್ಟ್ ಮೂರು ಟ್ರಸ್ಟ್‍ಗಳಿಗೆ ಟ್ರಸ್ಟಿಯಾಗಿರುವ ಪೂಜ್ಯ ಶ್ರೀ ಜಗದ್ಗುರು ಚನ್ನಬಸವಾನಂದ ಸ್ವಾಮೀಜಿಯವರು ಆಶ್ರಮದಲ್ಲಿಯೇ ಇದ್ದುಕೊಂಡು ಮುಂದುವರೆಯಬೇಕು. ಪೂಜ್ಯ ಸ್ವಾಮೀಜಿಯವರಿಗೆ ಟ್ರಸ್ಟ್ ವತಿಯಿಂದ ಸೂಕ್ತವಾದ ವಸತಿ ಮತ್ತು ನಿರ್ವಹಣೆಗೆ ಬೇಕಾಗುವ ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಡಬೇಕೆಂದು ಭಾರತದ ಸರ್ವೋಚ್ಛ ನ್ಯಾಯಾಲಯವು ಮಹತ್ವದ ಆದೇಶ ನೀಡಿದೆ.
ಇದೇ ತಿಂಗಳ ಮೇ 19 ರಂದು ದೆಹಲಿಯ ಮಾನ್ಯ ಸರ್ವೋಚ್ಛ ನ್ಯಾಯಾಲಯವು ಆದೇಶ ಹೊರಡಿಸಿದ್ದು, ಮೇ 19 ರಿಂದ ಒಂದು ವಾರದೊಳಗಾಗಿ ಅಂದರೆ ಮೇ 25ರ ಒಳಗಾಗಿ ಚನ್ನಬಸವಾನಂದ ಸ್ವಾಮೀಜಿಯವರಿಗೆ ಆಶ್ರಮದಲ್ಲಿ ಸೂಕ್ತ ವಸತಿ ವ್ಯವಸ್ಥೆ ಮಾಡಿಕೊಡದಿದ್ದರೆ ಈ ಮಧ್ಯಂತರ ಆದೇಶವು ರದ್ದುಗೊಳ್ಳಲಿದೆ ಎಂದು ಮಾನ್ಯ ಸುಪ್ರಿಂ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ ಎಂದು ಲಿಂಗಾಯತ ಧರ್ಮ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷರಾದ ಶಿವರಾಜ ಪಾಟೀಲ ಅತಿವಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜನವರಿ 16, 2023 ರಂದು ಕರ್ನಾಟಕ ಮಾನ್ಯ ಉಚ್ಛ ನ್ಯಾಯಾಲಯವು ಪೂಜ್ಯ ಶ್ರೀ ಜಗದ್ಗುರು ಚನ್ನಬಸವಾನಂದ ಸ್ವಾಮೀಜಿಯವರು ಎಲ್ಲಾ ಟ್ರಸ್ಟ್‍ಗಳಲ್ಲಿ ಮುಂದುವರೆಯುವಂತೆ ಮಹತ್ವದ ಆದೇಶ ಹೊರಡಿಸಿತ್ತು. ಆದರೆ ಹೈಕೋರ್ಟ್‍ನ ಆದೇಶವನ್ನು ಪ್ರಶ್ನಿಸಿ ಟ್ರಸ್ಟ್ ಅಧ್ಯಕ್ಷೆ ಮಾತೆ ಗಂಗಾದೇವಿಯವರು ಸುಪ್ರಿಂ ಕೋರ್ಟ್ ಮೆಟ್ಟಿಲೇರಿದ್ದರು. ಸುಪ್ರಿಂ ಕೋರ್ಟ್‍ನಲ್ಲಿ ಮೇ 19 ರಂದು ಪ್ರಕರಣ ನ್ಯಾಯಾಲಯದ ಮುಂದೆ ಬಂದಿತ್ತು. ಇಬ್ಬರ ವಾದ-ವಿವಾದಗಳನ್ನು ಆಲಿಸಿದ ನ್ಯಾಯಾಲಯವು ಪೂಜ್ಯ ಚನ್ನಬಸವಾನಂದ ಸ್ವಾಮೀಜಿಯವರನ್ನು ಆಶ್ರಮದಲ್ಲಿಯೇ ಇಟ್ಟುಕೊಂಡು ಒಂದು ವಾರದೊಳಗಾಗಿ ವಸತಿ ವ್ಯವಸ್ಥೆ ಕಲ್ಪಿಸಬೇಕೆಂದು ಮಹತ್ವದ ಆದೇಶ ಹೊರಡಿಸಿದೆ. ಈಗಾಗಲೇ ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಗಂಗಾದೇವಿಯವರಿಗೆ ಹೈಕೋರ್ಟ್‍ನಲ್ಲಿ ಹಿನ್ನಡೆಯಾಗಿದ್ದು, ಆದರೆ ದ್ವೇಷ ಅಸೂಯೆಯಿಂದ ಮತ್ತೆ ಸುಪ್ರಿಂ ಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲಿಯೂ ಕೂಡಾ ಮಾತೆ ಗಂಗಾದೇವಿಯವರಿಗೆ ತೀವ್ರ ಮುಖಭಂಗವಾಗಿದೆ. ಇನ್ನು ಮುಂದೆಯಾದರೂ ಪೂಜ್ಯ ಚನ್ನಬಸವಾನಂದ ಸ್ವಾಮೀಜಿಯವರ ಜೊತೆಯಲ್ಲಿ ಪ್ರೀತಿ ವಿಶ್ವಾಸದಿಂದ ಉಳಿದುಕೊಂಡು ಬಸವ ಧರ್ಮ ಪೀಠವನ್ನು ಉಳಿಸಿ ಬೆಳೆಸುವದಕ್ಕೆ ಮಾತೆ ಗಂಗಾದೇವಿಯವರು ಪ್ರಯತ್ನ ಮಾಡಲೆಂದು ಲಿಂಗಾಯತ ಧರ್ಮ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷರಾದ ಶಿವರಾಜ ಪಾಟೀಲ ಅತಿವಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.