ಚನ್ನಪಟ್ಟಣ ನಗರಸಭೆ ಜೆಡಿಎಸ್ ತೆಕ್ಕೆಗೆ

ರಾಮನಗರ, ಏ. ೩೦- ಕಳೆದ ಏಪ್ರಿಲ್ ೨೭ ರಂದು ಚುನಾವಣೆ ನಡೆದಿದ್ದ ನಗರ ಸ್ಥಳೀಯ ಸಂಸ್ಥೆಗಳ ಮತ ಎಣಿಕೆ ನಡೆದಿದ್ದು, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪ್ರತಿನಿಧಿಸುವ ಚನ್ನಪಟ್ಟಣ ಕ್ಷೇತ್ರ ವ್ಯಾಪ್ತಿಯ ಚನ್ನಪಟ್ಟಣ ನಗರಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರ ಹಿಡಿದಿದೆ.
ಸಚಿವ ಸಿ.ಪಿ. ಯೋಗೀಶ್ವರ್ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನಡುವೆ ಜಿದ್ದಾಜಿದ್ದಿ ಹೋರಾಟಕ್ಕೆ ಸಾಕ್ಷಿಯಾಗಿದ್ದ ಚನ್ನಪಟ್ಟಣ ನಗರಸಭೆ ಚುನಾವಣೆಯಲ್ಲಿ ಜೆಡಿಎಸ್ ಗೆದ್ದು ಬೀಗಿದ್ದು, ಸಚಿವ ಯೋಗೀಶ್ವರ್ ಅವರಿಗೆ ಮುಖಭಂಗವಾಗಿದೆ.
ಚನ್ನಪಟ್ಟಣ ನಗರಸಭೆಯಲ್ಲಿ ಒಟ್ಟು ೩೧ ವಾರ್ಡ್‌ಗಳಿದ್ದು, ೨೮ ವಾರ್ಡ್‌ಗಳ ಫಲಿತಾಂಶ ಪ್ರಕಟವಾಗಿದ್ದು, ಈ ಪೈಕಿ ಜೆಡಿಎಸ್ ಅಭ್ಯರ್ಥಿಗಳು ೧೬ ವಾರ್ಡ್‌ಗಳಲ್ಲಿ ಗೆದ್ದು ಸರಳ ಬಹುಮತ ಪಡೆದಿದ್ದಾರೆ.
ಉಳಿದಂತೆ ಕಾಂಗ್ರೆಸ್ ೭ ವಾರ್ಡ್‌ಗಳಲ್ಲಿ, ಬಿಜೆಪಿ ೫ ವಾರ್ಡ್‌ಗಳಲ್ಲಿ ಗೆಲುವು ದಾಖಲಿಸಿದ್ದು, ಇನ್ನು ಮೂರು ವಾರ್ಡ್‌ಗಳ ಫಲಿತಾಂಶ ಬಾಕಿ ಇದೆ.
ವಿಜಯಪುರದಲ್ಲೂ ಜೆಡಿಎಸ್ ಮುನ್ನಡೆ
ವಿಜಯಪುರ ಪುರಸಭೆ ಚುನಾವಣೆಯಲ್ಲೂ ಜೆಡಿಎಸ್ ಮುನ್ನಡೆ ಸಾಧಿಸಿದ್ದು, ವಿಜಯಪುರ ಪುರಸಭೆಯಲ್ಲಿ ಜೆಡಿಎಸ್ ೧೩ ವಾರ್ಡ್‌ನಲ್ಲಿ ಗೆದ್ದು ಅಧಿಕಾರ ಹಿಡಿದಿದೆ. ಉಳಿದಂತೆ ಕಾಂಗ್ರೆಸ್ ೭, ಬಿಜೆಪಿ ೧, ಪಕ್ಷೇತರರು ೨ ವಾರ್ಡ್‌ಗಳಲ್ಲಿ ಜಯಗಳಿಸಿದ್ದಾರೆ.
ಹೆಚ್‌ಡಿಕೆ ಧನ್ಯವಾದ
ಪಟ್ಟಣ ಪಂಚಾಯ್ತಿ, ಪುರಸಭೆ, ನಗರಸಭೆ ಸ್ಥಳೀಯ ಸಂಸ್ಥೆಗಳಲ್ಲಿ ಜೆಡಿಎಸ್ ಪಕ್ಷಕ್ಕೆ ಬೆಂಬಲ ನೀಡಿದ ರಾಜ್ಯದ ಜನತೆಗೆ ಮನದಾಳದ ಕೃತಜ್ಞತೆಗಳನ್ನು ಸಲ್ಲಿಸಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು, ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ ನಾಯಕರು, ಮುಖಂಡರು, ಎಲ್ಲಕ್ಕೂ ಮಿಗಿಲಾಗಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಅಭಿನಂದನೆ ಹೇಳಿದ್ದಾರೆ.
ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಹಣದ ಅಬ್ಬರ, ಜೆಡಿಎಸ್ ವಿರುದ್ಧ ಮಾಡಿದ ಅಪಪ್ರಚಾರಗಳ ನಡುವೆಯೂ ಜನತೆ ಚುನಾವಣೆಯಲ್ಲಿ ಪಕ್ಷದ ಕೈ ಹಿಡಿದು ಗೌರವಯುತ ತೀರ್ಪು ನೀಡಿರುವುದನ್ನು ಗೌರವಿಸುತ್ತೇನೆ ಎಂದು ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ.