ಚನ್ನಗಿರಿಯಲ್ಲಿ ಪರಿಸ್ಥಿತಿ ಶಾಂತ

ದಾವಣಗೆರೆ.ಮೇ೨೬; ಮಟ್ಕಾ ಪ್ರಕರಣದಲ್ಲಿ ಪೊಲೀಸರು ವಿಚಾರಣೆಗೆ ತಂದಿದ್ದ ವೇಳೆ ಸಾವನ್ನಪ್ಪಿದ್ದ ಆದಿಲ್ ಪ್ರಕರಣ ಇದೀಗ ಶಾಂತವಾಗಿದ್ದು ಚನ್ನಗಿರಿಯಲ್ಲಿ ಪೋಲೀಸ್ ಬಿಗಿಭದ್ರತೆ ನಿಯೋಜಿಸಲಾಗಿದೆ.ಪರಿಸ್ಥಿತಿ ನಿಯಂತ್ರಣದಲ್ಲಿದೆ.ಪ್ರಕರಣ ಗಂಭೀರವಾಗಿದ್ದರಿಂದ ನಿನ್ನೆ ದಾವಣಗೆರೆ ಜಿಲ್ಲಾಸ್ಪತ್ರೆಗೆ ನ್ಯಾಯಾಧೀಶರ ಸಮ್ಮುಖದಲ್ಲಿ ಆದಿಲ್ ಮರಣೋತ್ತರ ಪರೀಕ್ಷೆ ನಡೆಸಿದ್ದು ನಂತರ ಪೊಲೀಸ್ ಬಂದೋಬಸ್ತ್ ನಲ್ಲಿ ಚನ್ನಗಿರಿಗೆ ಕಳಿಸಲಾಯಿತು. ಬಳಿಕ ಚನ್ನಗಿರಿ ಪಟ್ಟಣದ ಈದ್ಗಾ ಮೈದಾನದ ಖಬರಸ್ಥಾನದಲ್ಲಿ ಮೃತ ಆದಿಲ್ ನ ಅಂತ್ಯಕ್ರಿಯೆಯು ಕುಟುಂಬಸ್ಥರು, ಸಂಬಂಧಿಗಳು, ಸ್ನೇಹಿತರ ಸಮಕ್ಷಮ ನೆರವೇರಿತು. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ.
೧೧ ಮಂದಿ ವಶಕ್ಕೆ
ಚನ್ನಗಿರಿ ಪೊಲೀಸ್ ಠಾಣೆ ಮೇಲೆ ದಾಂಧಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ೧೧ ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೊಬೈಲ್, ವೀಡಿಯೊ, ಸಿಸಿ ಕ್ಯಾಮರಾಗಳನ್ನು ಪರಿಶೀಲನೆ ಮಾಡಿ ಕಿಡಿಗೇಡಿಗಳನ್ನು ಗುರುತಿಸಲಾಗಿದ್ದು, ೪೦ಕ್ಕೂ ಹೆಚ್ಚು ಕಿಡಿಗೇಡಿಗಳನ್ನು ಪೊಲೀಸರು ಗುರುತಿಸಿದ್ದು ಇವರಲ್ಲಿ ೧೧ ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.
ಏನಿದು ಘಟನೆ
ಮಟ್ಕಾ ನಡೆಸುತ್ತಿದ್ದ ಆರೋಪದ ಮೇಲೆ ಆದಿಲ್ ಎಂಬಾತನನ್ನು ಚನ್ನಗಿರಿ ಪೊಲೀಸರು ಮೊನ್ನೆ ರಾತ್ರಿ ಠಾಣೆಗೆ ಕರೆತಂದಾಗ ಆತ ಕುಸಿದು ಬಿದ್ದಿದ್ದ. ಆಸ್ಪತ್ರೆಗೆ ಕರೆದೊಯ್ದಾಗ ಆತ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದು.ಇದು ಲಾಕಪ್‌ಡೆತ್ ಎಂದು ಮೃತರ ಸಂಬಂಧಿಕರು ಪೊಲೀಸ್ ಠಾಣೆ ಮೇಲೆ ಕಲ್ಲು ತೂರಿ ಪೊಲೀಸ್ ಠಾಣೆ ಒಳಗೂ ನುಗ್ಗಿ ದಾಂಧಲೆ ನಡೆಸಿದ್ದರು.