
ಚನ್ನಗಿರಿ ಜ 6,ಸಮಾಜದ ಸ್ವಾಸ್ಥ್ಯಕ್ಕಾಗಿ ಪ್ರಾರ್ಥಿಸಿ, ಚನ್ನಗಿರಿ ಶಾಸಕರಾದ ಮಾಡಾಳ್ ವಿರೂಪಾಕ್ಷಪ್ಪ ಮತ್ತು ಅವರ ಪುತ್ರರಾದ ಮಾಡಾಳ್ ಮಲ್ಲಿಕಾರ್ಜುನ ಅವರು ಚನ್ನಗಿರಿಯ ತಾಲೂಕು ಕ್ರೀಡಾಂಗಣದಲ್ಲಿ ಅದ್ಧೂರಿ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮವನ್ನು ಆಯೋಜಿಸಿದ್ದರು.ಶ್ರೀ ರಾಘವೇಂದ್ರ ಮಠದಿಂದ ಚನ್ನಗಿರಿಯ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಸಲಾಯಿತು. ನಂತರ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮ ಆಯೋಜಿಸಿದ್ದ ತಾಲೂಕು ಕ್ರೀಡಾಂಗಣಕ್ಕೆ ಮೆರವಣಿಗೆ ಸಾಗಿ ಸಂಜೆ 7.30ರ ಸುಮಾರಿಗೆ ಮಹಾ ಮಂಗಳಾರತಿ ಕಾರ್ಯಕ್ರಮ ನಡೆದು ಪ್ರಸಾದ ವಿನಿಯೋಗ ನಡೆಸಲಾಯಿತು. ಕಾರ್ಯಕ್ರಮಕ್ಕೆ ತಿರುಪತಿ ತಿರುಮಲ ದೇವಸ್ಥಾನದ ಆಗಮಿಕರು ಮತ್ತು ಶ್ರೀ ಎಸ್ ವೆಂಕಟೇಶ್ ಮೂರ್ತಿ ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದಲ್ಲಿ 15 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡು ಭಗವಂತನ ಆಶೀರ್ವಾದ ಪಡೆದರು.