ಚನಶೆಟ್ಟಿ ಕಸಾಪ ಚುನಾವಣಾ ಪ್ರಣಾಳಿಕೆ ಬಿಡುಗಡೆ

ಬೀದರ.ಮಾ.28: ಗಡಿ ಜಿಲ್ಲೆಯಲ್ಲಿ ಕನ್ನಡ ಇನ್ನಷ್ಟು ಗಟ್ಟಿಯಾಗಿ ಕಟ್ಟಲು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಅವರಿಗೆ ಇನ್ನೊಂದು ಅವಧಿಗೆ ಅವಕಾಶ ಕಲ್ಪಿಸಬೇಕು ಎಂದು ಜ್ಞಾನಸುಧಾ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಪೂರ್ಣಿಮಾ ಜಿ. ಮನವಿ ಮಾಡಿದರು.

ನಗರದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಕಚೇರಿಯಲ್ಲಿ ಸುರೇಶ ಚನಶೆಟ್ಟಿ ಅವರ ಚುನಾವಣಾ ಪ್ರಣಾಳಿಕೆ ಕರಪತ್ರ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಚನಶೆಟ್ಟಿ ಅವರು ಸಾಹಿತ್ಯ ಸಮ್ಮೇಳನ, ಸಾಹಿತಿಗಳ ಪರಿಚಯ, ಉಪನ್ಯಾಸ ಮತ್ತಿತರ ಕಾರ್ಯಕ್ರಮಗಳ ಮೂಲಕ ಜಿಲ್ಲೆಯಲ್ಲಿ ಕನ್ನಡ ಪರ ವಾತಾವರಣ ನಿರ್ಮಿಸಲು ಅವಿರತ ಶ್ರಮಿಸಿದ್ದಾರೆ. ಐದು ವರ್ಷಗಳ ಅವಧಿಯಲ್ಲಿ ಅತಿಹೆಚ್ಚು ಕಾರ್ಯಕ್ರಮಗಳನ್ನು ಸಂಘಟಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.

ಕ್ರಿಯಾಶೀಲ, ಸರಳ, ಸಜ್ಜನ, ಸ್ನೇಹಜೀವಿ ಆಗಿದ್ದಾರೆ.
ಗಡಿಯಲ್ಲಿ ಕನ್ನಡ ಅಭಿವೃದ್ಧಿಗೆ ಮತದಾರರು ಚನಶೆಟ್ಟಿ ಅವರನ್ನು ಬೆಂಬಲಿಸಬೇಕು ಎಂದು ಹೇಳಿದರು.

ಚನಶೆಟ್ಟಿ ತೆರೆಮರೆಯಲ್ಲಿದ್ದ ಅನೇಕ ಸಾಹಿತಿಗಳನ್ನು ಹೊರ ಜಗತ್ತಿಗೆ ಪರಿಚಯಿಸಿದ್ದಾರೆ. ಅನೇಕರಿಗೆ ಕೃತಿಗಳ ರಚನೆಗೆ ನೆರವಾಗಿದ್ದಾರೆ ಎಂದು ಹಿರಿಯ ಸಾಹಿತಿ ರಜಿಯಾ ಬಳಬಟ್ಟಿ ನುಡಿದರು.

ಪರಿಷತ್ತಿನಲ್ಲಿ ಮೊದಲ ಬಾರಿಗೆ ಮಹಿಳಾ ಘಟಕ ರಚಿಸಿ ಮಹಿಳೆಯರಿಗೆ ಪ್ರಾತಿನಿಧ್ಯ ಕಲ್ಪಿಸಿದ್ದಾರೆ. ಈ ಕಾರಣ ಅವರಿಗೆ ತಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಸಾಹಿತಿ ಪಾರ್ವತಿ ಸೋನಾರೆ ಹೇಳಿದರು.

ಜಿಲ್ಲಾ, ತಾಲ್ಲೂಕು, ವಲಯ ಹಾಗೂ ಗ್ರಾಮ ಮಟ್ಟದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ಕನ್ನಡ ಭವನಕ್ಕೆ ಅನುದಾನ ಮಂಜೂರು ಮಾಡಿಸುವಲ್ಲಿ ಯಶ ಕಂಡಿದ್ದಾರೆ ಎಂದು ರಾಜಮ್ಮ ಚಿಕ್ಕಪೇಟ ಹೇಳಿದರು.

ಸುರೇಶ 50 ಮನೆಯಂಗಳದಲ್ಲಿ ಮಾತು ಕಾರ್ಯಕ್ರಮಗಳನ್ನು ಆಯೋಜಿಸಿ ಪರಿಷತ್ತನ್ನು ಸಾಹಿತಿಗಳ ಮನೆ ಬಾಗಿಲಿಗೆ ಕೊಂಡೊಯ್ದಿದ್ದಾರೆ. ಸಚಿವರನ್ನು ಸಾಹಿತಿಗಳ ಮನೆಗೆ ಕರೆದುಕೊಂಡು ಹೋಗಿ ಗೌರವಿಸಿದ್ದಾರೆ. ಸಮಾಜದಲ್ಲಿ ಸಾಹಿತಿಗಳಿಗೆ ವಿಶೇಷ ಸ್ಥಾನಮಾನ ಒದಗಿಸಿದ್ದಾರೆ ಎಂದು ಕಸಾಪ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಜಯಶ್ರೀ ಸುಕಾಲೆ ಹೇಳಿದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಸಕಲೇಶ್ವರಿ ಚನಶೆಟ್ಟಿ, ಶ್ರೀದೇವಿ ಹೂಗಾರ, ಗಂಗಾಂಬಿಕಾ ಬಿರಾದಾರ, ಸಾಕ್ಷಿ ಬಿರಾದಾರ, ಸಂಗೀತ ಶೆಟಕಾರ್, ಟಿ.ಎಂ. ಮಚ್ಚೆ, ಜಗನ್ನಾಥ ಕಮಲಾಪುರೆ, ಬಸವರಾಜ ಬಲ್ಲೂರ, ಸಿದ್ಧಾರೂಢ ಭಾಲ್ಕೆ, ಗಿರಿರಾಜ ವಾಲೆ, ವೀರಶೆಟ್ಟಿ ಚನಶೆಟ್ಟಿ, ಓಂಕಾರ ಉಪ್ಪೆ, ಸಾಗರ, ಮೇನಕಾ ಪಾಟೀಲ, ಸುನೀತಾ ದಾಡಗಿ ಇದ್ದರು.

ರೂಪಾ ಪಾಟೀಲ ನಿರೂಪಿಸಿದರು. ಕಸ್ತೂರಿ ಪಟಪಳ್ಳಿ ಸ್ವಾಗತಿಸಿದರು. ವಿದ್ಯಾವತಿ ಬಲ್ಲೂರು ವಂದಿಸಿದರು.