ಚಡಚಣ ಹಾಗೂ ಇಂಡಿ ತಾಲೂಕಿಗೆ ಭೇಟಿ ನೀಡಿ, ವಿವಿಧ ಕಾಮಗಾರಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಟಿ.ಭೂಬಾಲನ್

(ಸಂಜೆವಾಣಿ ವಾರ್ತೆ)
ವಿಜಯಪುರ:ಆ.9: ಚಡಚಣ ಹಾಗೂ ಇಂಡಿ ತಾಲೂಕಿಗೆ ಮಂಗಳವಾರ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಭೇಟಿ ನೀಡಿ, ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು.
ಚಡಚಣ ತಾಲೂಕಿನ ತಹಶೀಲ್ದಾರ ಕಚೇರಿಗೆ ಭೇಟಿ ನೀಡಿ, ಪಟ್ಟಣಕ್ಕೆ ಕುಡಿಯುವ ನೀರು ಹಾಗೂ ಅಗತ್ಯ ಮೂಲಭೂತ ಸೌಕರ್ಯಗಳನ್ನು ವ್ಯವಸ್ಥಿತವಾಗಿ ಒದಗಿಸಬೇಕು. ಎಲ್ಲಾ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರಬೇಕು. ಕುಂದುಕೊರತೆಯ ಬಗ್ಗೆ ಸಾರ್ವಜನಿಕರಿಂದ ದೂರುಗಳಿದ್ದಲ್ಲಿ ನಿಯಮಾನುಸಾರ ಪರಿಶೀಲಿಸಿ ಕ್ರಮ ವಹಿಸಬೇಕು. ಸ್ವೀಕರಿಸುವ ಅರ್ಜಿಗಳನ್ನು ಕಾಲಮಿತಿಯಲ್ಲಿ ಇತ್ಯರ್ಥಪಡಿಸಬೇಕು. ಯಾವುದೇ ದೂರುಗಳಿಗೆ ಆಸ್ಪದಕ್ಕೆ ಎಡೆ ಮಾಡದೇ ಕಾರ್ಯ ನಿರ್ವಹಿಸಬೇಕು ಎಂದು ತಹಶೀಲ್ದಾರ ಅವರಿಗೆ ಸೂಚಿಸಿದರು.
ಪಟ್ಟಣ ಪಂಚಾಯತಿಗೆ ಭೇಟಿ ನೀಡಿ, ಅಲ್ಲಿನ ಕಾರ್ಯ ನಿರ್ವಹಣೆ ಕುರಿತು ಪರಿಶೀಲಿಸಿದರು. ಸಾರ್ವಜನಿಕರಿಗೆ ಒದಗಿಸುವ ಶುದ್ಧ ಕುಡಿಯುವ ನೀರು ಪೂರೈಸುವ ಮುಂಚೆ ಪರಿಶೀಲನೆ ನಡೆಸಬೇಕು. ಪಟ್ಟಣದ ಸ್ವಚ್ಚತೆಗೆ ಪ್ರಥಮಾದ್ಯತೆ ನೀಡುವಂತೆ ಮುಖ್ಯಾಧಿಕಾರಿಗಳಿಗೆ ಸೂಚಿಸಿದರು. ಬರಡೋಲ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮ ಒನ್ ಕೇಂದ್ರದಲ್ಲಿ ಗೃಹಲಕ್ಷ್ಮಿ ಯೋಜನೆ ಸೇರಿದಂತೆ ವಿವಿಧ ಯೋಜನೆಯ ಫಲಾನುಭವಿಗಳ ಅರ್ಜಿಗಳನ್ನು ಸ್ವೀಕರಿಸುವ ಕುರಿತು ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು, ಯಾವುದೇ ಗೊಂದಲವಾಗದ ರೀತಿಯಿಂದ ಕಾರ್ಯನಿರ್ವಹಿಸಬೇಕು. ಅಗತ್ಯ ದಾಖಲೆ ಹೊಂದುವ ಕುರಿತು ಮನವರಿಕೆ ಮಾಡಿಕೊಡಬೇಕು. ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಸೂಕ್ತ ಸಲಹೆ ಸೂಚನೆ ನೀಡಬೆಕು.
ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳ ನೋಂದಾಯಿಸಲು ಆಗಮಿಸುವ ಸಾರ್ವಜನಿಕರಿಗೆ ನೋಂದಣಿ ವಿಳಂಬವಾಗದಂತೆ ನೋಡಿಕೊಳ್ಳಬೇಕು. ಈ ಕೇಂದ್ರಗಳಲ್ಲಿ ನೋಂದಣಿ ಉಚಿತವಾಗಿದ್ದು, ಯಾವುದೇ ದೂರು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿದ ಅವರು, ರೈತರಿಗೆ ಸಮರ್ಪಕವಾಗಿ ರಸಗೊಬ್ಬರ, ಬಿತ್ತನೆ ಬೀಜ ಕೊರತೆಯಾಗದಂತೆ ದಾಸ್ತಾನು ಹೊಂದಿರಬೇಕು. ಸಕಾಲದಲ್ಲಿ ರೈತರಿಗೆ ರಸಗೊಬ್ಬರ ಹಾಗೂ ಬಿತ್ತನೆ ಬೀಜ ವಿತರಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಪಟ್ಟಣದಲ್ಲಿ ಮಿನಿ ವಿಧಾನಸೌಧ ನಿರ್ಮಿಸಲು ಮೀಸಲಿಟ್ಟ ಸ್ಥಳ ಪರಿಶೀಲನೆ ನಡೆಸಿ ಕಟ್ಟಡ ನಿರ್ಮಾಣಕ್ಕೆ ಕಾನೂನಿನ ತೊಂದರೆಗಳಿದ್ದಲ್ಲಿ ಆದಷ್ಟು ಶೀಘ್ರವಾಗಿ ಸರಿಪಡಿಸಲು ಸೂಚಿಸಿದರು.
ನಂತರ ಧೂಳಖೇಡ ಗ್ರಾಮದ ಹತ್ತಿರದ ಭೀಮಾ ನದಿಗೆ ಭೇಟಿ ನೀಡಿ, ಇಂಡಿ ನಗರಕ್ಕೆ ನೀರು ಪೂರೈಸುವ ಜಾಕ್ವೆಲ್ ಪರಿಶೀಲಿಸಿದ ಅವರು, ಇಂಡಿ ಪಟ್ಟಣದ ಸಾರ್ವಜನಿಕರಿಗೆ ಸಮರ್ಪಕವಾಗಿ ಕುಡಿಯುವ ನಿರು ಪೂರೈಸುವುದು, ಕೆರೆಗಳಿಗೆ ನೀರು ತುಂಬುವ ಯೋಜನೆಯಡಿ ಕೆರೆ ಭರ್ತಿಗೆ ಕ್ರಮದ ಕುರಿತು ಚರ್ಚಿಸಿದರು. ಬಳ್ಳೊಳ್ಳಿ ನಾಡ ಕಚೇರಿಗೆ ಭೇಟಿ ನೀಡಿದ ಅವರು, ನಾಡ ಕಚೇರಿಯ ಸಿಬ್ಬಂದಿ ಹಾಜರಾತಿ ಹಾಗೂ ಕಾರ್ಯವೈಖರಿ ಬಗ್ಗೆ ಪರಿಶೀಲನೆ ನಡೆಸಿ ಅಗತ್ಯ ಸಲಹೆ ಸೂಚನೆ ನೀಡಿದರು. ಇಂಡಿ ತಾಲೂಕಿನ ಚಿಕ್ಕ ಬೇವನೂರಿನ ಶಾಲೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಶಾಲಾ ಮಕ್ಕಳ ಆರೋಗ್ಯ ಹಿತದೃಷ್ಟಿಯಿಂದ ಶುದ್ಧ ಕುಡಿಯುವ ನೀರು, ಶೌಚಾಲಯ ಹೊಂದಿರುವ ಕುರಿತು ಶಿಕ್ಷಕರಿಂದ ಮಾಹಿತಿ ಪಡೆದುಕೊಂಡರು. ಬಬಲಾದ ಗ್ರಾಮದ ಗ್ರಾಮ ಒನ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಇಂಡಿ ಉಪವಿಭಾಗಾಧಿಕಾರಿಗಳಾದ ಅಬೀದ ಗದ್ಯಾಳ, ಚಡಚಣ ತಹಶೀಲ್ದಾರ ಸಂಜಯ ಇಂಗಳೆ,ಉಪ ತಹಶೀಲ್ದಾರರು,ಪುರಸಭೆ ಮುಖ್ಯಾಧಿಕಾರಿ,ಕಂದಾಯ ನಿರೀಕ್ಷಕರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.