ಚಡಚಣ ಪ್ರವಾಹ ಪೀಡಿತ ತಾಲೂಕುಗಳ ಪಟ್ಟಿಯಿಂದ ಕೈ ಬಿಟ್ಟಿರುವುದು ನೋವಿನ ಸಂಗತಿಃ ಶಾಸಕ ಡಾ. ಚವ್ಹಾಣ

ವಿಜಯಪುರ, ಅ.30-ನಾಗಠಾಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚಡಚಣ ತಾಲೂಕು ಪ್ರವಾಹಪೀಡಿತ ತಾಲೂಕಾಗಿದ್ದರೂ ಪ್ರವಾಹ ಪೀಡಿತ ತಾಲೂಕುಗಳ ಪಟ್ಟಿಯಿಂದ ಕೈ ಬಿಟ್ಟಿರುವುದು ನೋವಿನ ಸಂಗತಿ, ದಲಿತರು ಉಪಮುಖ್ಯಮಂತ್ರಿಯಾಗಿರುವುದು ಸಂತೋಷದ ಸಂಗತಿ, ಆದರೆ ಚುನಾವಣೆಯಲ್ಲಿ ಅವರ ಪುತ್ರ ಸೋತಿದ್ದರಿಂದ ಸೇಡಿನ ರಾಜಕಾರಣ ಮಾಡುತ್ತಿದ್ದು, ಪ್ರತಿಯೊಂದು ವಿಷಯದಲ್ಲಿಯೂ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ನಾಗಠಾಣ ಶಾಸಕ ಡಾ.ದೇವಾನಂದ ಚವ್ಹಾಣ ಗಂಭೀರವಾಗಿ ಆರೋಪಿಸಿ ಡಿಸಿಎಂ ಕಾರಜೋಳ ಅವರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಗಠಾಣ ವಿಧಾನಸಭಾ ಕ್ಷೇತ್ರದ ಚಡಚಣ ತಾಲೂಕಿನಲ್ಲಿ ಸಾಕಷ್ಟು ಹಳ್ಳಿಗಳು ಭೀಮಾ ನದಿ ಪ್ರವಾಹದಿಂದ ತೊಂದರೆಗೆ ಸಿಲುಕಿವೆ, ಸಾಕಷ್ಟು ಜನ ಸಂತ್ರಸ್ತರಾಗಿದ್ದಾರೆ. ಅತಿವೃಷ್ಟಿ ತಾಲೂಕುಗಳ ಪಟ್ಟಿಯಲ್ಲಿ ಚಡಚಣ ಬಿಟ್ಟು ಹೋಗದೆ ಹಾನಿ ಸಮೀಕ್ಷೆ ಕೂಡ ಸರಿಯಾಗಿ ನಡೆದಿಲ್ಲ. ಜನ ಕಾಳುಕಡಿ ಎಲ್ಲ ಕಳೆದುಕೊಂಡು ಉಟ್ಟ ಬಟ್ಟೆಯಲ್ಲಿ ಊರು ತೊರೆದಿದ್ದಾರೆ, ಆದರೆ ಇಲ್ಲಿಯವರೆಗೂ ಅವರಿಗೆ ನಯಾಪೈಸೆ ಪರಿಹಾರ ಸಿಕ್ಕಿಲ್ಲ. ಇನ್ನೂ ಕೆಲವರಿಗೆ ಅವೈಜ್ಞಾನಿಕ ಪರಿಹಾರ ಹಣ ಮುಟ್ಟಿಸಿ ಬಂದ ಅಧಿಕಾರಿಗಳು ಅಸೆಡ್ಡೆಯಿಂದ ವರ್ತಿಸುತ್ತಿದ್ದಾರೆ. ಬೀದಿಗೆ ಬಿದ್ದ ಕುಟುಂಬದಿಂದಲೂ ರಾಜಾರೋಷವಾಗಿ ದುಡ್ಡು ಪಡೆಯಲಾಗಿದೆ ಎಂದು ಗಂಭೀರವಾಗಿ ಆರೋಪಿಸಿದರು.
ಇನ್ನೊಂದೆಡೆ ಉಪಮುಖ್ಯಮಂತ್ರಿಗಳು ನಾಗಠಾಣ ವಿಧಾನಸಭಾ ಕ್ಷೇತ್ರದ ಪ್ರತಿ ಹಂತದಲ್ಲಿಯೂ ಹಸ್ತಕ್ಷೇಪ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಸಾವಿರಾರು ಎಕರೆ ಸರಕಾರಿ ಭೂಮಿ ಅತಿಕ್ರಮಣ ಆಗಿದೆ. ಜನತೆಗೆ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿಯೂ ಅಡ್ಡಗಾಲು ಹಾಕುತ್ತಿದ್ದಾರೆ, ನಾಗಠಾಣ ವಿಧಾನಸಭಾ ಕ್ಷೇತ್ರಕ್ಕೆ ಬರಬೇಕಾದ ಸಾವಿರಾರು ಕೋಟಿ ರೂ. ಅನುದಾನ ತಡೆಹಿಡಿದ್ದಾರೆ. ಚಡಚಣದಲ್ಲಿ ಶೇ.90 ರಷ್ಟು ಕೆಲಸ ಆಗಿದ್ದರೂ ಅನುದಾನ ತಡೆಹಿಡಿಯಲಾಗಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ದೊಡ್ಡ ಕ್ಷೇತ್ರವಾಗಿದ್ದರೂ ಸಹ ನಾಗಠಾಣ ವಿಧಾನಸಭಾ ಕ್ಷೇತ್ರದ ಪರಿಸ್ಥಿತಿಯೇ ಬೇರೆಯಾಗಿದೆ, ಸಮ್ಮಿಶ್ರ ಸರಕಾರದಲ್ಲಿ ಸಾಕಷ್ಟು ಅನುದಾನ ಮತಕ್ಷೇತ್ರಕ್ಕೆ ಹರಿದು ಬಂದಿತ್ತು, ಪರಿಣಾಮವಾಗಿ ಅನೇಕ ರೀತಿಯ ಅಭಿವೃದ್ಧಿಯ ಕಾರ್ಯಗಳು ನಡೆದಿದ್ದವು, ಆದರೆ ಈಗಿನ ಸರಕಾರದಲ್ಲಿ ಹಿಂದೆ ಕೊಟ್ಟ ಅನುದಾನ ತಡೆಹಿಡಿಯಲಾಗಿದೆ. ನಾಗಠಾಣ ಹಾಗೂ ಮಿಂಚನಾಳ ರಸ್ತೆ ಕೆಲಸ ಆರಂಭಿಸಿಲ್ಲ. ಅಧಿಕಾರಿಗಳ ಮೇಲೆ ಒತ್ತಡ ಹೇರಿ ಕಾಮಗಾರಿಗೆ ತಡೆಯೊಡ್ಡಲಾಗುತ್ತಿದೆ, ಹತ್ತಳ್ಳಿ ಬ್ರಿಡ್ಜ್ ಕಂ ಬಾಂದಾರ್‍ಗಳ ನಿರ್ಮಾಣ ಕಾರ್ಯಕ್ಕೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದರೂ ಸಹ ಈ ಕಾಮಗಾರಿಯನ್ನು ವ್ಯವಸ್ಥಿತವಾಗಿ ತಡೆ ಹಿಡಿಯಲಾಗಿದೆ ಎಂದು ಡಾ.ಚವ್ಹಾಣ ಗಂಭೀರವಾಗಿ ದೂರಿದರು.
ಬೇಲಿಯೇ ಎದ್ದು ಹೊಲ ಮೇಯ್ದರೇ ಹೇಗೆ?ಃ ಉನ್ನತ ಹುದ್ದೆಯಲ್ಲಿದ್ದವರು ಕುಡಿಯುವ ನೀರಿನ ವಿಷಯದಲ್ಲೂ ರಾಜಕಾರಣ ಮಾಡುತ್ತಿದ್ದಾರೆ. ಸುಮ್ಮನೆ ಕೂರು ಅಂದ್ರೆ ಸುಮ್ಮನಿರುತ್ತೇನೆ. ಅವರೇ ಅಭಿವೃದ್ಧಿ ಕಾರ್ಯ ಮಾಡಲಿ. ಸರಕಾರ ತಾರತಮ್ಯ ಮಾಡದೆ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕು. ರಸ್ತೆಯಲ್ಲಿ ಬಿಜೆಪಿ, ಜೆಡಿಎಸ್. ಕಾಂಗ್ರೆಸ್ ಎನ್ನದೆ ಎಲ್ಲರೂ ಓಡಾಡುತ್ತಾರೆ. ಇದನ್ನು ಅರ್ಥ ಮಾಡಿಕೊಂಡು ಕೆಲಸ ಮಾಡಬೇಕು. ಬೇಲಿಯೇ ಎದ್ದು ಹೊಲ ಮೇಯ್ದಂತೆ ಎನ್ನುವಂತೆ ಉನ್ನತ ಹುದ್ದೆಯಲ್ಲಿರುವವರೇ ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಡಾ.ಚವ್ಹಾಣ ವ್ಯಂಗ್ಯವಾಡಿದರು.
ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರು ಪ್ರವಾಹದಲ್ಲಿ ಹಾನಿಯಾದ ರಸ್ತೆಗಳನ್ನು ತಾತ್ಕಾಲಿಕವಾದರೂ ದುರಸ್ತಿ ಮಾಡಿಸಬೇಕು. ಶೇಂಗಾ, ಹೆಸರು ಬೆಳೆ ಸಹ ಹಾನಿಯಾಗಿದ್ದು ಆದರೆ ಸಮೀಕ್ಷೆಯಲ್ಲಿ ಈ ಬೆಳೆಗಳು ಬಿಟ್ಟು ಹೋಗಿವೆ, ಹೀಗಾಗಿ ಈ ಬೆಳೆಗಳನ್ನು ಸಹ ಸೇರ್ಪಡೆ ಮಾಡಿ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.
ಮರಳು ಮಾಫಿಯಾ ಸಕ್ರೀಯಃ ಅದೇ ತೆರನಾಗಿ ಕ್ಷೇತ್ರ ವ್ಯಾಪ್ತಿಯಲ್ಲಿ ಮರಳು ಮಾಫಿಯಾ ಸಕ್ರೀಯವಾಗಿದೆ, ಇದನ್ನು ಮಟ್ಟ ಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲ, ಜಿಲ್ಲೆಯ ಹಾಗೂ ರಾಜ್ಯ ನಾಯಕರು ಮರಳು ಮಾಫಿಯಾ ಜೊತೆ ಶಾಮೀಲಾಗಿದ್ದಾರೆ, ಈ ಹಿಂದೆ ಉಪವಿಭಾಗಾಧಿಕಾರಿಗಳು ಅಕ್ರಮ ಮರಳಿಗೆ ಸಂಬಂಧಿಸಿದಂತೆ ದಾಳಿ ನಡೆಸಿದ್ದರೂ ಆದರೆ ಪ್ರಭಾವಿಗಳ ಒತ್ತಡಕ್ಕೆ ಮಣಿದು ದಾಳಿ ಮಾಡುವುದನ್ನು ಅಷ್ಟಕ್ಕೆ ನಿಲ್ಲಿಸಿದ್ದಾರೆ ಎಂದು ದೂರಿದರು.