ಚಟರ್ಜಿ ಉಚ್ಚಾಟನೆಗೆ ಟಿಎಂಸಿ ಕುನಾಲ್ ಒತ್ತಾಯ

ಪಶ್ಚಿಮ ಬಂಗಾಳ, ಜು.೨೮: ಶಿಕ್ಷಕರ ನೇಮಕಾತಿ ಹಗರಣದಲ್ಲಿ ಇಡಿ ಬಂಧನದಲ್ಲಿರುವ ಟಿಎಂಸಿ ಸಚಿವ ಪಾರ್ಥ ಚಟರ್ಜಿಯವರನ್ನು ಪಕ್ಷದಿಂದ ಉಚ್ಚಾಟಿಸಿ, ಎಲ್ಲಾ ಹುದ್ದೆಗಳಿಂದ ತೆಗೆದು ಹಾಕಬೇಕು ಎಂದು ಟಿಎಂಸಿ ವಕ್ತಾರ ಕುನಾಲ್ ಘೋಷ್ ಅವರು ಪಕ್ಷವನ್ನು ಒತ್ತಾಯಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಪಾರ್ಥ ಚಟರ್ಜಿ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ನಡೆಸುತ್ತಿರುವ ತನಿಖೆಯ ನಡುವೆ ಘೋಷ್ ಅವರು ಈ ಹೇಳಿಕೆ ನೀಡಿದ್ದಾರೆ. ಚಟರ್ಜಿ ಅವರ ಆಪ್ತ ಸಹಾಯಕಿ ಅರ್ಪಿತಾ ಮುಖರ್ಜಿ ಅವರ ಎರಡನೇ ಅಪಾರ್ಟ್‌ಮೆಂಟ್ ಇಡಿ, ೨೮.೯೦ ಕೋಟಿ ರೂ. ನಗದು, ೫ ಕೆಜಿಗೂ ಹೆಚ್ಚು ಚಿನ್ನ ಮತ್ತು ಹಲವಾರು ದಾಖಲೆಗಳನ್ನು ವಶಪಡಿಸಿಕೊಂಡಿದೆ. ಈ ಹಿಂದೆ ಮುಖರ್ಜಿ ಅವರ ಮನೆಯಲ್ಲಿ ೨೧.೯೦ ಕೋಟಿ ರೂ. ನಗದು, ೫೬ ಲಕ್ಷ ರೂ. ವಿದೇಶಿ ಕರೆನ್ಸಿ ಮತ್ತು ೭೬ ಲಕ್ಷ ರೂ. ಮೌಲ್ಯದ ಚಿನ್ನವನ್ನು ಸಂಸ್ಥೆ ಪತ್ತೆ ಮಾಡಿತ್ತು. ಇದೆಲ್ಲವೂ ಹಗರಣದಿಂದ ಗಳಿಸಿದ ಆದಾಯ ಎಂದು ಶಂಕಿಸಲಾಗಿದೆ.
ಪಾರ್ಥ ಚಟರ್ಜಿ ಮತ್ತು ಅರ್ಪಿತಾ ಮುಖರ್ಜಿ ಅವರನ್ನು ಆಗಸ್ಟ್ ೩ ರವರೆಗೆ ಇಡಿ ಕಸ್ಟಡಿಗೆ ಕಳುಹಿಸಲಾಗಿದೆ.ಕೊಲ್ಕತ್ತಾ ಹೈಕೋರ್ಟ್, ಇತ್ತೀಚೆಗೆ ರಿಟ್ ಅರ್ಜಿಗಳ ಸರಣಿಯಲ್ಲಿ, ಗ್ರೂಪ್ ‘ಸಿ’ ಮತ್ತು ‘ಡಿ’ ಸಿಬ್ಬಂದಿ, ಸಹಾಯಕ ಶಿಕ್ಷಕರು ಮತ್ತು ಪ್ರಾಥಮಿಕ ಶಿಕ್ಷಕರ ನೇಮಕಾತಿ ಹಗರಣದ ಬಗ್ಗೆ ತನಿಖೆ ನಡೆಸುವಂತೆ ಕೇಂದ್ರೀಯ ತನಿಖಾ ದಳಕ್ಕೆ ಇತ್ತೀಚೆಗೆ ನಿರ್ದೇಶನ ನೀಡಿತ್ತು.
ಈ ಪ್ರಕರಣಗಳಲ್ಲಿ, ಬೋಧಕೇತರ ಸಿಬ್ಬಂದಿ (ಗುಂಪು ಅ&ಆ),ಬೋಧಕ ಸಿಬ್ಬಂದಿ ಮತ್ತು ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಅಕ್ರಮ ನೇಮಕಾತಿಯನ್ನು ಒಳಗೊಂಡಿರುವವರ ವಿರುದ್ಧ ಇಡಿ ಮನಿ ಲಾಂಡರಿಂಗ್ ತಡೆ ಕಾಯ್ದೆಯಡಿ ಪ್ರಕರಣ ದಾಖಸಿದ್ದು, ತನಿಖೆ ನಡೆಸುತ್ತಿದೆ.