ಚಂಪಾ ನಿಧನಕ್ಕೆ ಮುರುಘಾಶ್ರೀ ಸಂತಾಪ


ಚಿತ್ರದುರ್ಗ ಜ. 10 : ಕನ್ನಡ ನಾಡು-ನುಡಿ ಅಭಿವೃದ್ಧಿಯ ಹೆಸರಾಂತ ಹೋರಾಟಗಾರ; ದಲಿತ-ಬಂಡಾಯ ಧ್ವನಿತ ಪ್ರಗತಿಪರ ಚಿಂತಕ; ಪತ್ರಿಕಾ ಸಂಪಾದಕ; ಹಿರಿಯ ಸಾಹಿತಿಗಳೂ ಆದ ಪ್ರೊ. ಚಂದ್ರಶೇಖರ ಪಾಟೀಲ್  ನಿಧನಕ್ಕೆ ಡಾ. ಶಿವಮೂರ್ತಿ ಮುರುಘಾ ಶರಣರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.ಕನ್ನಡ ನಾಡು ನುಡಿಯನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಚಂಪಾರವರು ಗೋಕಾಕ್ ಚಳುವಳಿಯಲ್ಲಿ ಮುಂಚೂಣಿಯಲ್ಲಿ ಕೆಲಸ ಮಾಡಿದವರು. ಕನ್ನಡಕ್ಕೆ ಎಲ್ಲಿಯೇ ಅನ್ಯಾಯವಾದರೂ ಧ್ವನಿ ಎತ್ತುತ್ತಿದ್ದರು. ಅವರ ಅಗಲಿಕೆಯಿಂದ ನಾಡು ಓರ್ವ ಹೋರಾಟಗಾರನನ್ನು ಕಳೆದುಕೊಂಡಿದೆ. ಚಂಪಾರ ಸಾಹಿತ್ಯ ರಚನೆ ಮತ್ತು ಜೀವಿತಾವಧಿಯ ಹೋರಾಟಗಳು 12ನೇ ಶತಮಾನದ ಬಸವಾದಿ ಶರಣರ ಚಳವಳಿಯ ಆಶಯಗಳಿಗೆ ಅನುಗುಣವಾಗಿರುವುದನ್ನು ಗುರುತಿಸಿ ಶ್ರೀ ಮುರುಘಾಮಠವು 2018ರಲ್ಲಿ ಬಸವಶ್ರೀ ಪ್ರಶಸ್ತಿ ನೀಡಿ ಗೌರವಿಸಿದ್ದನ್ನು ಸ್ಮರಿಸಿರುವ ಶ್ರೀಗಳು, ಮೌಢ್ಯ, ಪುರೋಹಿತ್ಯ ಮತ್ತು ಊಳಿಗಮಾನ್ಯ ವ್ಯವಸ್ಥೆಯ ವಿರುದ್ಧದ ನಿರಂತರ ಪ್ರತಿಭಟನೆಗಳ ಹರಿಕಾರರಾಗಿ ಪ್ರಖರ ವೈಜ್ಞಾನಿಕ ಚಿಂತಕರಾಗಿ ಎಲ್ಲ ಜನವರ್ಗದಲ್ಲಿ ಚಿರಪರಿಚಿತರಾಗಿದ್ದರು. ಹಾಸ್ಯ, ವಿಡಂಬನೆ ಮತ್ತು ನೇರ-ನಿಷ್ಠುರ ನುಡಿ ನಡೆಯವರಾಗಿದ್ದರು ಎಂದಿದ್ದಾರೆ.