
ನವದೆಹಲಿ,ಆ.೨೪- ಚಂದ್ರಯಾನ-೩ ರ ಲ್ಯಾಂಡರ್ ರೋವರ್ ಚಂದ್ರನ ದಕ್ಷಿಣ ಧೃವದಲ್ಲಿ ಇಳಿಯುವ ಮೂಲಕ ಚಂದ್ರನ ಅಂಗಳಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿ ಇತಿಹಾಸ ನಿರ್ಮಿಸಿದ ಬೆನ್ನಲ್ಲೇ ಇನ್ನು ಮುಂದಿನ ೧೪ ದಿನಗಳಲ್ಲಿ, ಆರು ಚಕ್ರಗಳ ರೋವರ್ ಚಂದ್ರನ ಮೇಲ್ಮೈಯಲ್ಲಿ ಪ್ರಯೋಗ ನಡೆಸಲು ಮುಂದಾಗಿದೆ.
ಪ್ರ್ರಗ್ಯಾನ್ ರೋವರ್ ವಿಕ್ರಂ ಲ್ಯಾಂಡರ್‌ನಿಂದ ಹೊರ ಬಂದಿದ್ದು, ಚಂದ್ರನ ಮೇಲ್ಮೈಮೇಲೆ ಚಲನೆ ಆರಂಭಿಸಿದೆ ಎಂದು ಇಸ್ರೋ ಟ್ವೀಟ್ ಮಾಡಿದೆ.ಈ ಐತಿಹಾಸಿಕ ಲ್ಯಾಂಡಿಂಗ್ ಮಾಡಿದ ಕೆಲವೇ ಗಂಟೆಗಳಲ್ಲಿ ಮುಂದಿನ ಹಂತ ಆರಂಭಿಸಿದೆ. ಇದೇ ವೇಳೆ ಚಂದ್ರಯಾನ-೩ ಯಶಸ್ವಿಯಾಗಿರುವುದಕ್ಕೆ ರಾಷ್ಟ್ರಪತಿ ದ್ರೌಪದಿಮುರ್ಮು ಇಸ್ರೋಗೆ ಅಭಿನಂದಿಸಿದ್ದಾರೆ.
ರೋವರ್ ಅನ್ನು ಚಂದ್ರನ ಮೇಲೆ ಇಳಿಸುವಲ್ಲಿ ಯಶಸ್ಸು ಕಂಡಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳ ಸಂಪೂರ್ಣ ಚಿತ್ತ ಇನ್ನು ಚಂದ್ರನ ಮೇಲ್ಮೈನಲ್ಲಿ ಸಂಶೋಧನೆ ನಡೆಸುವುದು ಮತ್ತು ಅಲ್ಲಿನ ಸೂಕ್ಷ್ಮಾತಿ ಸೂಕ್ಷ್ಮ ವಿಷಯಗಳ ಪತ್ತೆ ಮಾಡುವಲ್ಲಿ ಗಮನ ಹರಿಸಿದೆ.
ಚಂದ್ರನ ಮಣ್ಣಿನಿಂದ ಸ್ವಲ್ಪ ದೂರದಲ್ಲಿರುವ ರೋವರ್, ಇಂದು ಮುಂಜಾನೆ ೧.೩೦ರ ಸುಮಾರಿನಿಂದ ರೋವರ್ ಲ್ಯಾಂಡರ್ ಸುತ್ತಲಿನ ಪ್ರದೇಶಗಳಲ್ಲಿ ಸುರಕ್ಷಿತವಾಗಿ ಸಂಚಾರ ಆರಂಭಿಸಿದೆ.ಚಂದ್ರನ ಅಂಗಳದಲ್ಲಿರುವ ನೀರು, ಗಾಳಿ, ಹವಾಮಾನ ಬದಲಾವಣೆಗಳು, ಹವಾಮಾನ ಪ್ರಕ್ರಿಯೆಗಳು ಮತ್ತು ಭೂಮಿಯಂತೆ ಸಸ್ಯವರ್ಗವಿಲ್ಲ. ಆದ್ದರಿಂದ, ಟಾಲ್ಕಮ್ ಪೌಡರ್ ತರಹದ ಚಂದ್ರನ ಮಣ್ಣಿನ ವಿವಿಧ ವಿಷಯಗಳನ್ನು ಪತ್ತೆ ಮಾಡಲಿದೆ.ಆ ನಿಟ್ಟಿನಲ್ಲಿ ವಿಜ್ಞಾನಿಗಳು ಗಮನ ಹರಿಸಿದ್ದಾರೆ
ರೋವರ್‌ನ ಚಕ್ರಗಳು ಭಾರತದ ರಾಷ್ಟ್ರೀಯ ಲಾಂಛನದ ಮುದ್ರೆ ಹೊಂದಿವೆ ಎಂದು ಹೇಳಲಾಗುತ್ತದೆ,ಅಶೋಕನ ಸಾರನಾಥ ಸಿಂಹ ರಾಜಧಾನಿಯಿಂದ ರೂಪಾಂತರಗೊಂಡಿದೆ. ಇದರ ಜೊತೆಗೆ, ರೋವರ್ ಚಕ್ರಗಳಲ್ಲಿ ಇಸ್ರೋ ಲೋಗೋ ಕೂಡ ಇದೆ.
ಚಂದ್ರನ ಮೇಲ್ಮೈಯಲ್ಲಿ ಇಳಿಯುತ್ತಿದ್ದಂತೆ ಐತಿಹಾಸಿಕ ಸಾಧನೆ ಮಾಡುವ ಮೂಲಕ ೧.೪ ಶತಕೋಟಿ ಜನರ ಭರವಸೆ, ಮತ್ತು ಪ್ರಾರ್ಥನೆಗೆ ಫಲ ಸಿಕ್ಕಿದೆ.ಈ ಮೂಲಕ ಭಾರತ ಬಾಹ್ಯಾಕಾಶದಲ್ಲಿ ವಿಕ್ರಮ ಮೆರೆದಿದೆ. ಈ ಮೂಲಕ ಚಂದ್ರನ ಅಂಗಳಲ್ಲಿ ಇಳಿದ ನಾಲ್ಕನೇ ದೇಶ ಹಾಗೂ ದಕ್ಷಿಣ ಧೃವದಲ್ಲಿ ಇಳಿದ ಮೊದಲ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ.
ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಚಂದ್ರನ ಮೇಲ್ಮೈಯಲ್ಲಿ ಪರಸ್ಪರ ಸಮನ್ವಯ ಸಾಧಿಸಿ ಅಧ್ಯಯನ ಮಡಲು ಮುಂದಾಗಿವೆ
೧೪ ದಿನಗಳ ಕೆಲಸದ ನಂತರ, ಸೌರಶಕ್ತಿ ಚಾಲಿತ ರೋವರ್‌ನ ಚಟುವಟಿಕೆ ನಿಧಾನಗೊಳ್ಳುವ ಸಾಧ್ಯತೆಯಿದೆ. ಈ ಸಮಯದಲ್ಲಿ, ಲ್ಯಾಂಡರ್ ವಿಕ್ರಮ್‌ನೊಂದಿಗೆ ಸ್ಪರ್ಶಿಸಲ್ಪಡುತ್ತದೆ ಬಳಿಕ ಇಸ್ರೋಗೆ ಡೇಟಾವನ್ನು ರಿಲೇ ಮಾಡುತ್ತದೆ. ರೋವರ್‌ನೊಂದಿಗೆ ಇಸ್ರೋ ನೇರ ಸಂಪರ್ಕ ಹೊಂದಿಲ್ಲ ಎಂದು ತಿಳಿಸಲಾಗಿದೆ.
ಸದ್ಯದಲ್ಲೇ ಚಿತ್ರ ಬಿಡುಗಡೆ:
ಲ್ಯಾಂಡರ್ ಮತ್ತು ರೋವರ್ ಎರಡೂ ಆರೋಗ್ಯವಾಗಿದ್ದು, ವಿಕ್ರಮ್ ಲ್ಯಾಂಡರ್‌ನಿಂದ ಪ್ರಗ್ಯಾನ್ ಹೊರಬಂದಿದೆ ಸದ್ಯದಲ್ಲೇ ಎರಡರಿಂದಲೂ ಚಿತ್ರಗಳು ಬಿಡುಗಡೆಯಾಗಬಹುದು ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ತಿಳಿಸಿದ್ದಾರೆ.ಮುಂದಿನ ೧೪ ದಿನಗಳಲ್ಲಿ, ಆರು ಚಕ್ರಗಳ ರೋವರ್ ಚಂದ್ರನ ಮೇಲ್ಮೈಯಲ್ಲಿ ಪ್ರಯೋಗಗಳನ್ನು ನಡೆಸುತ್ತದೆ. ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಎರಡೂ ೧ ಚಂದ್ರನ ದಿನದ ಮಿಷನ್ ಜೀವನ ಹೊಂದಿವೆ, ಇದು ಭೂಮಿಯ ಮೇಲೆ ೧೪ ದಿನಗಳಿಗೆ ಸಮಾನವಾಗಿರುತ್ತದೆ ಎಂದಿದ್ಧಾರೆ
ಎಕ್ಸ್-ರೇ ಸ್ಪೆಕ್ಟ್ರೋಮೀಟರ್ ಅನ್ನು ರಾಸಾಯನಿಕ ಸಂಯೋಜನೆಯನ್ನ ಚಂದ್ರನ ಮೇಲ್ಮೈಯ ಬಗ್ಗೆ ಅಧ್ಯಯನ ಮಾಡಲು ಖನಿಜ ಸಂಪತ್ತು ಶೋಧಿಸಲು ಬಳಸಲಾಗುತ್ತಿದೆ ಎಂದಿದ್ಧಾರೆ.ಲ್ಯಾಂಡರ್ ಸಮೀಪದ ಮೇಲ್ಮೈ ಪ್ಲಾಸ್ಮಾ ಸಾಂದ್ರತೆ ಮತ್ತು ಸಮಯದೊಂದಿಗೆ ಅದರ ಬದಲಾವಣೆ ಗುರುತಿಸಲು ಭೌತಿಕ ಪ್ರಯೋಗ ನಡೆಸಲಿದೆ. ಚಂದ್ರನ ಮೇಲ್ಮೈಯ ಉಷ್ಣ ಗುಣಲಕ್ಷಣಗಳ ಮಾಪನ ಪರೀಕ್ಷಿಸಲಿದೆ ಎಂದು ಹೇಳಲಾಗಿದೆ.