ಚಂದ್ರು ಶವಪತ್ತೆ ಕೊಲೆ ಕೇಸ್ ದಾಖಲು

ಬೆಂಗಳೂರು, ನ.೪- ಶಾಸಕ ಎಂ.ಪಿ.ರೇಣುಕಾಚಾರ್ಯ ತಮ್ಮನ ಮಗ ಚಂದ್ರಶೇಖರ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ವಿಶೇಷ ಪೊಲೀಸ್ ತಂಡಗಳನ್ನು ರಚಿಸಿ ತನಿಖೆ ಚುರುಕುಗೊಳಿಸಿದೆ.
ಚಂದ್ರಶೇಖರ್ ಸಾವಿನ ಸಂಬಂಧಿಸಿದಂತೆ ದಾಖಲಿಸಿರುವ ಎಫ್‌ಐಆರ್‌ನಲ್ಲಿ ಐಪಿಸಿ ೩೦೨ (ಕೊಲೆ), ೨೦೧ (ಸಾಕ್ಷ್ಯನಾಶ) ಮತ್ತು ೪೨೭ (ವಾಹನ ಜಖಂ) ಕಲಂಗಳನ್ನು ದಾಖಲಿಸಲಾಗಿದೆ.ಮೃತ ಚಂದ್ರಶೇಖರ್ ಅವರ ತಂದೆ ರಮೇಶ್ ನೀಡಿರುವ ದೂರಿನ ಅನ್ವಯ ಎಫ್‌ಐಆರ್ ದಾಖಲಿಸಲಾಗಿದೆ. ಈ ಮೊದಲು ವ್ಯಕ್ತಿ ನಾಪತ್ತೆ ಎಂದು ಎಫ್‌ಐಆರ್ ದಾಖಲಿಸಲಾಗಿತ್ತು. ಇದೀಗ ಕೊಲೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ತುಂಗಾ ನಾಲೆಯಲ್ಲಿ ಪತ್ತೆಯಾದ ಕಾರಿನ ಹಿಂಬದಿಯ ಸೀಟ್‌ನಲ್ಲಿ ಚಂದ್ರಶೇಖರ್ ಮೃತ ದೇಹ ಇತ್ತು. ಕೈಕಾಲುಗಳನ್ನು ಕಟ್ಟಿಹಾಕಿ, ಕಿವಿಗಳಿಗೆ ಹಲ್ಲೆ ಮಾಡಲಾಗಿದೆ. ತಲೆಗೆ ಆಯುಧದಿಂದ ಹೊಡೆಯಲಾಗಿದೆ ಎಂಬ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ದೂರಿನ ವಿವರ:
ಎಂ.ಪಿ.ರೇಣುಕಾಚಾರ್ಯ ಕುಟುಂಬಸ್ಥರು ನೀಡಿದ ದೂರಿನಲ್ಲಿ ಚಂದ್ರಶೇಖರ್ ಮೃತದೇಹ ಕಾರಿನ ಹಿಂದಿನ ಸೀಟ್‌ನಲ್ಲಿತ್ತು. ಅಷ್ಟೇ ಅಲ್ಲದೇ ಚಂದ್ರಶೇಖರ್‌ನ ಕೈಕಾಲುಗಳನ್ನು ಕಟ್ಟಿ ಹಾಕಿದ್ದರು. ನಂತರ ಕಿವಿ, ತಲೆಗೆ ಆಯುಧದಿಂದ ಹಲ್ಲೆ ಸಹ ಮಾಡಲಾಗಿತ್ತು. ಕೊಲೆ ಮಾಡಿ ಅಪಘಾತ ಎಂದು ಬಿಂಬಿಸಲು ಪ್ರಯತ್ನಿಸಿದ್ದಾರೆ. ಮೃತದೇಹವನ್ನು ಕಾರಿನಲ್ಲಿಟ್ಟು ತುಂಗಾ ಕಾಲುವೆಗೆ ದೂಡಿದ್ದಾರೆ. ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳಿ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅಂತ್ಯಕ್ರಿಯೆ
ಹೊನ್ನಾಳಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯರ ಸಹೋದರ ಎಂ. ಪಿ. ರಮೇಶ್ ಪುತ್ರ ಚಂದ್ರಶೇಖರ್ ಅಂತ್ಯಕ್ರಿಯೆ ನೆರವೇರಿತು.ಜಿಲ್ಲಾಸ್ಪತ್ರೆಯಲ್ಲಿ ಮಧ್ಯರಾತ್ರಿ ೧ ಗಂಟೆಯವರೆಗೂ ಮರಣೋತ್ತರ ಪರೀಕ್ಷೆ ನಡೆದಿದ್ದು, ಎಸ್ ಎಫ್‌ಎಲ್ ಗೆ ವರದಿ ಕಳುಹಿಸಿ ಕೊಡಲಾಗಿದೆ. ಮೃತದೇಹದ ಅಂತಿಮ ದರ್ಶನಕ್ಕೆ ಹೊನ್ನಾಳಿ ಪಟ್ಟಣದ ರೇಣುಕಾಚಾರ್ಯ ಮನೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ರೇಣುಕಾಚಾರ್‍ಯ ಶೋಕ ಸಾಗರದಲ್ಲಿ ಮುಳುಗಿದೆ.
ಹೊನ್ನಾಳಿ, ನ್ಯಾಮತಿ ಸೇರಿದಂತೆ ಹಳ್ಳಿಗಳಿಂದಲೂ ಜನರು ಜಮಾಯಿಸಿದ್ದು, ಮಾಜಿ ಸಚಿವ ಹಾಗೂ ಶಾಸಕ ಕೆ. ಎಸ್. ಈಶ್ವರಪ್ಪರ ಪುತ್ರ ಕಾಂತೇಶ್ ಸೇರಿದಂತೆ ಬಿಜೆಪಿ
ಮುಖಂಡರು, ಕಾರ್ಯಕರ್ತರು ಅಂತಿಮ ದರ್ಶನ ಪಡೆದರು.