
ಬೀದರ್:ಆ.24: ಚಂದ್ರಯಾನ-3 ಯೋಜನೆ ಯಶಸ್ಸಿಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ, ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರು ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ಇದು ಭಾರತಕ್ಕೆ ಹೆಮ್ಮೆಯ ವಿಷಯ ಇಬ್ಬರು ಪ್ರತ್ಯೇಕವಾಗಿ ಹೊರಡಿಸಿರುವ ಪ್ರಕಟಣೆಗಳಲ್ಲಿ ತಿಳಿಸಿದ್ದಾರೆ.
ಈವರೆಗೆ ಯಾವುದೇ ದೇಶವೂ ಚಂದ್ರನ ಅಂಗಳದ ದಕ್ಷಿಣ ಧ್ರುವದಲ್ಲಿ ತನ್ನ ವ್ಯೋಮ ನೌಕೆ ಇಳಿಸುವಲ್ಲಿ ಸಾಧಿಸಲಾಗದ ‘ವಿಕ್ರಮ’ ಸಾಧಿಸಿ ಲ್ಯಾಂಡರ್ ಅನ್ನು ಚಂದ್ರಮನ ಮೇಲೆ ಇಳಿಸಿದ ಭಾರತದ ಬಾಹ್ಯಾಕಾಶ ವಿಜ್ಞಾನಿಗಳಿಗೆ ಮತ್ತು ಇಸ್ರೊಗೆ ಖಂಡ್ರೆ ಅಭಿನಂದನೆ ತಿಳಿಸಿದ್ದಾರೆ.
ಚಂದ್ರಯಾನ -2ರ ಭಾಗಶಃ ವೈಫಲ್ಯದಿಂದ ಧೃತಿಗೆಡದೆ ಮರಳಿ ಯತ್ನವ ಮಾಡು ಎನ್ನುವಂತೆ ಚಂದ್ರಯಾನ -3 ಯೋಜನೆ ರೂಪಿಸಿ ಯಶಸ್ವಿಯಾಗಿ ಚಂದ್ರನ ಅಂಗಳ ಸ್ಪರ್ಶಿಸಿ, ಶಶಿಯ ಮೇಲೂ ಭಾರತದ ಕೀರ್ತಿ ಪತಾಕೆ ಹಾರಿಸಿದ ಇಸ್ರೊ ವಿಜ್ಞಾನಿಗಳು ಭಾರತದ ಸಾಮಥ್ರ್ಯವನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಹಗಲಿರುಳು ಚಂದ್ರಯಾನ-3 ಯಶಸ್ಸಿಗೆ ಶ್ರಮಿಸಿದ ವಿಜ್ಞಾನಿಗಳು ಪ್ರತಿಯೊಬ್ಬ ಭಾರತೀಯರಿಗೂ ಹೆಮ್ಮೆ ತಂದಿದ್ದಾರೆ. ಈಗ ಪ್ರಜ್ಞಾನ್ ರೋವರ್ ಕೂಡ ಯಶಸ್ವಿಯಾಗಿ ಕಾರ್ಯಾಚರಣೆ ಮಾಡಿ ಚಂದ್ರನ ಮೇಲ್ಮೈನಲ್ಲಿರುವ ಅಮೂಲ್ಯ ಮಾಹಿತಿಯನ್ನು ಜಗತ್ತಿಗೆ ನೀಡಲಿ. ಚಂದ್ರಾನ್ವೇಷಣೆ ಯಶಸ್ವಿಯಾಗಲಿ. ಇದರಿಂದ ಇಡೀ ಮಾನವ ಕುಲಕ್ಕೆ ಒಳಿತಾಗಲಿ. ಯುವಪೀಳಿಗೆಗೆ ಪ್ರೇರಣೆ ಸಿಗಲಿ ಎಂದು ಹಾರೈಸಿದ್ದಾರೆ.
ಚಂದ್ರಯಾನ -3 ಯಶಸ್ವಿ ಉಡಾವಣೆಯ ನಂತರ, ಇಂದು ಶಶಿ ಅಂಗಳದ ಮೇಲೆ ಸಾಫ್ಟ್ ಲ್ಯಾಂಡಿಂಗ್ ಆಗಿರುವುದು ದೇಶಕ್ಕೆ ಹೆಮ್ಮೆಯ ಸಂಗತಿ. ಹಿಂದೆ ಗುರುವಿನ ಆರ್ಶೀವಾದವಿದ್ದು ಮುಂದೆ ಗುರಿ ಸ್ಪಷ್ಟವಾಗಿದ್ದರೆ, ಎಲ್ಲವನ್ನು ಸಾಧಿಸಬಹುದು ಎಂದು ನಮ್ಮ ಇಸ್ರೊ ವಿಜ್ಞಾನಿಗಳು ಸಾಧಿಸಿ ತೊರಿಸಿದ್ದಾರೆ. ಈ ಐತಿಹಾಸಿಕ ಕಾರ್ಯಕ್ಕಾಗಿ ಹಗಲಿರುಳು ಶ್ರಮಿಸಿದ, ಎಲ್ಲಾ ವಿಜ್ಞಾನಿಗಳಿಗೆ ನನ್ನ ತುಂಬು ಹೃದಯದ ಅಭಿನಂದನೆಗಳು. ದಕ್ಷಿಣ ಧ್ರುವಕ್ಕೆ ತೆರಳಿದ ಮೊದಲ ದೇಶ ನಮ್ಮದಾಗಿದೆ ಎಂದು ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.
ಇಡೀ ದೇಶಕ್ಕೆ ಇದೊಂದು ಐತಿಹಾಸಿಕ ಕ್ಷಣ., ಭಾರತವು ಎಲ್ಲಾ ರಂಗಗಳಲ್ಲಿ ಸಾಧನೆಗೈದು, ವಿಶ್ವಗುರುವಾಗಿದೆ ಎಂದು ಎಲ್ಲರೂ ಹೆಮ್ಮೆಯಿಂದ ಹೇಳಿಕೊಳ್ಳಬಹುದು. ದೇಶದ ಉಜ್ವಲ ಭವಿಷ್ಯಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆ ಅತಿ ಅವಶ್ಯಕವಾಗಿದೆ. ನಮ್ಮ ವಿಜ್ಞಾನ ತಂತ್ರಜ್ಞಾನದ ಮೇಲೆ ವಿಶ್ವವೇ ಹೆಮ್ಮೆ ಪಡುವಂತಹ ಸಾಧನೆ ಇಸ್ರೊ ವಿಜ್ಞಾನಿಗಳು ಮಾಡಿದ್ದಾರೆ ಎಂದು ಕೊಂಡಾಡಿದ್ದಾರೆ.