ಚಂದ್ರಯಾನ-3 ಯಶಸ್ವಿ ಹಿನ್ನೆಲೆ ರಾಷ್ಟ್ರಧ್ವಜ ಹಿಡಿದು ಸಂಭ್ರಮಿಸಿದ ಎಕಲಾರ ಶಾಲೆ ಮಕ್ಕಳು

(ಸಂಜೆವಾಣಿ ವಾರ್ತೆ)
ಔರಾದ :ಆ.26: ಚಂದ್ರಯಾನ-3 ಯಶಸ್ವಿಯಾದ ಹಿನ್ನೆಲೆ ತಾಲೂಕಿನ ಎಕಲಾರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ವಿದ್ಯಾರ್ಥಿ ಹಾಗೂ ಶಿಕ್ಷಕರಿಂದ ಪರಸ್ಪರ ಸಿಹಿ ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು.
ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಸ್ಪರ್ಶ ಮಾಡಿದ ಸನ್ನಿವೇಶದ ಕುರಿತು ವಿವರಣೆ ನೀಡಿದ ಶಾಲಾ ಶಿಕ್ಷಕ ಬಾಲಾಜಿ ಅಮರವಾಡಿ, ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆ ಕಳುಹಿಸಿ ಯಶಸ್ವಿಯಾದ ಮೊದಲ ದೇಶ ಭಾರತ ಎಂಬುದು ನಮ್ಮೆಲ್ಲರಿಗೂ ಅಭಿಮಾನದ ವಿಷಯ. ಅನೇಕ ಸಂಶೋಧಕರು, ವಿಜ್ಞಾನಿಗಳ ನಿರಂತರ ಪರಿಶ್ರಮದಿಂದ ಇಂದು ಭಾರತ ಐತಿಹಾಸಿಕ ಹೆಜ್ಜೆ ಇಟ್ಟಿದೆ ಎಂದರು.
ಶಿಕ್ಷಕ ಅಂಕುಶ ಪಾಟೀಲ ಮಾತನಾಡಿ, ಅತ್ಯಂತ ಕಡಿಮೆ ಬಜೆಟ್‍ನಲ್ಲಿ ಚಂದ್ರಯಾನ ನೌಕೆ ಕಳುಹಿಸಿ ಸಾಧನೆ ಮಾಡಿದ್ದು, ಭಾರತೀಯರ ಬುದ್ದಿವಂತಿಕೆ ಮತ್ತು ಸಾಮಥ್ರ್ಯ ತೋರಿಸುತ್ತದೆ ಎಂದರು. ಶಾಲೆಯ ಎಲ್ಲ ಮಕ್ಕಳಿಗೆ ಸಿಹಿ ಹಂಚಲಾಯಿತು. ಮಕ್ಕಳು ದೇಶಭಕ್ತಿ ಗೀತೆಗಳ ಮೇಲೆ ಕುಣಿದು ಕುಪ್ಪಳಿಸಿದರು. ದೇಶ ಸೇರಿದಂತೆ ಇಸ್ರೋ ಕುರಿತು ಜೈಘೋಷ ಹಾಕಿದರು.
ಈ ಸಂದರ್ಭದಲ್ಲಿ ಮುಖ್ಯಶಿಕ್ಷಕ ಪ್ರಭು ಬಾಳೂರೆ, ಶಿಕ್ಷಕರಾದ ಜೈಸಿಂಗ್ ಠಾಕೂರ, ವೀರಶೆಟ್ಟಿ ಗಾದಗೆ, ಬಾಲಾಜಿ ಅಮರವಾಡಿ, ಅಕುಶ ಪಾಟೀಲ್, ರೂಪಾ, ಸಿದ್ದೇಶ್ವರಿ ಸ್ವಾಮಿ, ಸೇರಿದಂತೆ ಅಂಗನವಾಡಿ ಕಾರ್ಯಕರ್ತೆ, ಆಶಾ ಕಾರ್ಯಕರ್ತೆಯರು, ಎಕಲಾರ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ಗ್ರಾಮಸ್ಥರು ಪಾಲ್ಗೊಂಡು ಸಂಭ್ರಮಿಸಿದರು.