ಚಂದ್ರಯಾನ-೩ರ ಲ್ಯಾಂಡರ್ ಸೆರೆಹಿಡಿದ ನಾಸಾದ ಎಲ್‌ಆರ್‌ಒ

ನ್ಯೂಯಾರ್ಕ್, ಸೆ.೬- ಚಂದ್ರನ ಮೇಲೆ ಲ್ಯಾಂಡರ್ ಇಳಿಸುವ ಮೂಲಕ ಈಗಾಗಲೇ ಜಗತ್ತಿನ ಗಮನ ಸೆಳೆದಿರುವ ಇಸ್ರೋದ ಯಶಸ್ಸನ್ನು ಇದೀಗ ನಾಸಾ ಪುನರುಚ್ಛರಿಸಿದೆ. ಚಂದ್ರನ ಮೇಲಿನ ಇಸ್ರೋದ ಲ್ಯಾಂಡರ್ ಅನ್ನು ನಾಸಾದ ಲೂನಾರ್ ರೆಕಾನೈಸೆನ್ಸ್ ಆರ್ಬಿಟರ್ (ಎಲ್‌ಆರ್‌ಒ) ಸೆರೆಹಿಡಿದಿದ್ದು, ಸದ್ಯ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆಗಸ್ಟ್ ೨೭ ರಂದು ಚಂದ್ರನ ಮೇಲೆ ಚಂದ್ರಯಾನ-೩ರ ಐತಿಹಾಸಿಕ ಕ್ಷಣದ ನಾಲ್ಕು ದಿನಗಳ ನಂತರ ನಾಸಾದ ಎಲ್‌ಆರ್‌ಒ ಚಿತ್ರವನ್ನು ಸೆರೆಹಿಡಿದಿದೆ. ಸದ್ಯ ಎಲ್‌ಆರ್‌ಒ ಸೆರೆಹಿಡಿದಿರುವ ಫೊಟೋವನ್ನು ನಾಸಾವು ಎಕ್ಸ್ (ಟ್ವಿಟರ್)ನಲ್ಲಿ ಹಂಚಿಕೊಂಡಿದ್ದು, ?ಎಲ್‌ಆರ್‌ಒ ಬಾಹ್ಯಾಕಾಶ ನೌಕೆಯು ಇತ್ತೀಚೆಗೆ ಚಂದ್ರನ ಮೇಲ್ಮೈಯಲ್ಲಿ ಚಂದ್ರಯಾನ -೩ ಲ್ಯಾಂಡರ್ ಅನ್ನು ಸೆರೆಹಿಡಿದಿದೆ? ಎಂದು ಕ್ಯಾಪ್ಶನ್ ನೀಡಲಾಗಿದೆ. ನಾಸಾದ ಪ್ರಕಾರ ಎಲ್‌ಆರ್‌ಒ ಕ್ಯಾಮೆರಾವು ಚಂದ್ರಯಾನದ ನಾಲ್ಕು ದಿನಗಳ ಬಳಿಕ ಲ್ಯಾಂಡರ್‌ನ ಓರೆಯಾದ ಚಿತ್ರವನ್ನು ಪಡೆದುಕೊಂಡಿದೆ. ಎಲ್‌ಆರ್‌ಒ ಅನ್ನು ಅಮೆರಿಕಾದ ಮೇರಿಲ್ಯಾಂಡ್‌ನ ಗ್ರೀನ್‌ಬೆಲ್ಟ್‌ನಲ್ಲಿರುವ ನಾಸಾದ ಗೊಡ್ಡಾರ್ಡ್ ಬಾಹ್ಯಾಕಾಶ ಹಾರಾಟ ಕೇಂದ್ರವು ನಿರ್ವಹಿಸುತ್ತದೆ. ಈ ನಡುವೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಂಗಳವಾರ ಚಂದ್ರನ ದಕ್ಷಿಣ ಧ್ರುವದಿಂದ ಚಂದ್ರಯಾನ -೩ ವಿಕ್ರಮ್ ಲ್ಯಾಂಡರ್‌ನ ೩ ಆಯಾಮದ ’ಅನಾಗ್ಲಿಫ್ ಚಿತ್ರವನ್ನು ಬಿಡುಗಡೆ ಮಾಡಿದೆ.