ಚಂದ್ರಯಾನ ಯಶಸ್ಸಿಗೆ ವಿಶೇಷ ಪೂಜೆ

(ಸಂಜೆವಾಣಿ ಪ್ರತಿನಿಧಿಯಿಂದ)
ಚಂದ್ರಯಾನ-೩ ಯಶಸ್ಸಿಗಾಗಿ ಬೆಂಗಳೂರಿನ ಬನಶಂಕರಿ ದೇವಾಲಯದಲ್ಲಿ ಪೂಜೆ ನೆರವೇರಿಸಲಾಯಿತು. ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಎ.ಎಚ್. ಬಸವರಾಜು, ಅರ್ಚಕ ಚಂದ್ರಮೋಹನ್, ಮತ್ತಿತರರು ಇದ್ದಾರೆ.

ಬೆಂಗಳೂರು,ಆ.೨೩:ಚಂದ್ರಯಾನ-೩ ಯಶಸ್ಸಿಗಾಗಿ ರಾಜ್ಯಾದ್ಯಂತ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ-ಪುರಸ್ಕಾರಗಳು ಇಂದು ನೆರವೇರಿತು. ಬೆಂಗಳೂರಿನ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಹೋಮ-ಹವನ ನಡೆಯಿತು. ನವಗ್ರಹ ಹಾಗೂ ಚಂಡಿಕಾಹೋಮ ನಡೆಸಿ ಯಾವುದೇ ಅಡೆತಡೆಗಳು ಎದುರಾಗದಂತೆ ಚಂದ್ರಯಾನಕ್ಕೆ ಯಶಸ್ಸು ಸಿಗಲಿ ಎಂದು ಪ್ರಾರ್ಥಿಸಲಾಯಿತು.ಹುಬ್ಬಳ್ಳಿಯ ಸಿದ್ಧರೂಢ ಮಠದಲ್ಲಿ ರುದ್ರಾಭಿಷೇಕ ಮತ್ತು ವಿಶೇಷ ಪೂಜೆ ನೆರವೇರಿಸಲಾಯಿತು. ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಭಕ್ತರಿಂದ ಚಂದ್ರಯಾನ ರಾಕೆಟ್ ಭಾವಚಿತ್ರ ಹಿಡಿದು ಪೂಜೆ ನೆರವೇರಿಸಿ, ಲ್ಯಾಂಡರ್ ಸುರಕ್ಷಿತವಾಗಿ ಚಂದ್ರನ ಮೇಲೆ ಇಳಿಯಲೆಂದು ಪ್ರಾರ್ಥಿಸಲಾಯಿತು.
ಶಿವಮೊಗ್ಗದ ಸಿಗಂಧೂರು ಚೌಡೇಶ್ವರಿ ದೇವಾಲಯದಲ್ಲಿ ದುರ್ಗಾ ಸಪ್ತಸತಿ ಪಾರಾಯಣ, ಚಂಡಿಕಾ ಹೋಮ ನೆರವೇರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಾಲಯದ ಧರ್ಮದರ್ಶಿ ಎಸ್. ರಾಮಪ್ಪ ನೇತೃತ್ವದಲ್ಲಿ ಚೌಡೇಶ್ವರಿ ದೇವಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.
ಇತ್ತ ಶ್ರೀಶೈಲ ಮಲ್ಲಿಕಾರ್ಜುನ ಜ್ಯೋರ್ತಿಲಿಂಗದಲ್ಲಿ ಚಂದ್ರಯಾನ-೩ ಯಶಸ್ವಿಯಾಗಲೆಂದು ಪ್ರಾರ್ಥಿಸಿ ಪೂಜೆ ಸಲ್ಲಿಸಲಾಯಿತು. ಭವ್ಯ ಭಾರತದ ಆಶಾಕಿರಣವಾಗಿರುವ ಚಂದ್ರಯಾನ ಯಶಸ್ವಿಯಾಗಿ ವಿಜ್ಞಾನಿಗಳು ಹೊಸ ಹೊಸ ಸಂಶೋಧನೆ ನಡೆಸುವಂತಾಗಲಿ ಎಂದು ಪ್ರಾರ್ಥಿಸಲಾಯಿತು ಎಂದು ಶ್ರೀಶೈಲ ಜಗದ್ಗುರು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬಿಜೆಪಿ ಮುಖಂಡರು ಮಂತ್ರಾಲಯಕ್ಕೆ ತೆರಳಿ ಗುರುರಾಘವೇಂದ್ರರಿಗೆ ವಿಶೇಷ ಪೂಜೆ ನೆರವೇರಿಸಿದರು.