ಚಂದ್ರಯಾನ ಯಶಸ್ವಿ: ವಿಜ್ಞಾನಿಗಳಿಗೆ ವಿದ್ಯಾರ್ಥಿಗಳ ನಮನ

ಮಧುಗಿರಿ, ಆ. ೨೯- -ಭಾರತದ ಚಂದ್ರಯಾನ-೩ ಯಶಸ್ವಿಗೊಂಡ ಹಿನ್ನೆಲೆಯಲ್ಲಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಅವರಣದಲ್ಲಿ ಹಳೆಯ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ದೇಶದ ವಿಜ್ಞಾನಿಗಳಿಗೆ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತುಮಕೂರು ವಿಶ್ವವಿದ್ಯಾನಿಲಯದ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಜಿ. ರಾಮಕೃಷ್ಣ, ಆಗಸ್ಟ್ ೨೩ ಭಾರತೀಯರ ಪಾಲಿಗೆ ಅವಿಸ್ಮರಣಿಯ ದಿನ. ದೇಶದ ವಿಜ್ಞಾನಿಗಳ ನೂರಾರು ವರ್ಷದ ಕನಸು ನನಸಾಗಿಸಿದ ದಿನ. ಚಂದ್ರಯಾನ-೩ ಯಶಸ್ವಿನೊಂದಿಗೆ ಬಾಹ್ಯಾಕಾಶದಲ್ಲಿ ಭಾರತದ ಸಾಧನೆ ಏನೆಂಬುದು ಇಡೀ ಜಗತ್ತಿಗೆ ಪರಿಚಯವಾದಂತಾಗಿದೆ. ಅಲ್ಲದೆ, ಇತರೇ ದೇಶಗಳಿಗಿಂತ ವಿಜ್ಞಾನ ತಂತ್ರಜ್ಞಾನ ಭಾರತ ಮುಂದಿದೆ ಎಂಬುದನ್ನು ತೋರಿಸಿಕೊಟ್ಟಿದೆ. ಈಗಾಗಲೇ ಚಂದ್ರನ ಮೇಲೆ ಕಾಲಿಟ್ಟಿರುವ ಚೀನಾ, ಅಮೆರಿಕ, ಜಪಾನ್ ದೇಶಗಳಿಗಿಂತಲೂ ಅತಿ ಕಡಿಮೆ ವೆಚ್ಚದಲ್ಲಿ ಚಂದ್ರನ ಮೇಲೆ ಭಾರತದ ಉಪಗ್ರಹವನ್ನು ಇಳಿಸುವ ಮೂಲಕ ಒಂದು ಹೊಸ ಸಂದೇಶವನ್ನು ಜಗತ್ತಿಗೆ ನಮ್ಮ ವಿಜ್ಞಾನಿಗಳು ತೋರಿಸಿಕೊಟ್ಟಿದ್ದಾರೆ. ಇದಕ್ಕಾಗಿ ನಾವು ದೇಶದ ವಿಜ್ಞಾನಿಗಳಿಗೆ ಎಷ್ಟು ಅಭಿನಂದನೆಗಳನ್ನು ಸಲ್ಲಿಸಿದರು ಸಾಲದು ಎಂದರು.
ಸೆಪ್ಟೆಂಬರ್ ಮಾಹೆಯಲ್ಲಿ ಸೂರ್ಯಗ್ರಹ ತಲುಪುವ ಯತ್ನ ಯಶಸ್ವಿಯಾಗಲಿ ಎಂದು ವಿಜ್ಞಾನಿಗಳಿಗೆ ಶುಭ ಹಾರೈಸಲಾಯಿತು. ಈಗಾಗಲೇ ಜಪಾನ್ ಭಾರತದ ಸಂಯೋಗದೊಂದಿಗೆ ಇನ್ನಷ್ಟು ವಿಜ್ಞಾನದ ಆವಿಷ್ಕಾರಗಳು ಅಗಲಿದೆ ಎಂದರು
“ನಮ್ಮ ಭಾರತ ನಮ್ಮ ಹೆಮ್ಮೆ, ನಮ್ಮ ವಿಜ್ಞಾನಿಗಳು ನಮ್ಮ ಹೆಮ್ಮೆ ’ಎಂಬ ಘೋಷ ವಾಕ್ಯಗಳನ್ನು ಕೂಗಿ ವಿಜ್ಞಾನಿಗಳ ಕಾರ್ಯವನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿಗಳಾದ ಸಿ.ಎ. ಆದಿರಮೇಶ್, ಎಂ. ಎ. ಮಹದೇಶ್ವರ, ಮಾದೇಶ್, ಪಾಂಡುರಂಗಯ್ಯ, ಜಿ. ನಾರಾಯಣರಾಜು, ಶಶಿಧರ್ ಮತ್ತಿತರರು ಉಪಸ್ಥಿತರಿದ್ದರು.