ಚಂದ್ರಯಾನಕ್ಕೆ ಪಾಕ್‌ನಿಂದ ಪ್ರಶಂಸೆ

ಇಸ್ಲಾಮಾಬಾದ್,ಅ.೨೩-ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಪ್ರತಿಷ್ಠಿತ ಚಂದ್ರಯಾನ-೩ ಉಡಾವಣೆ ಕುರಿತು ಪಾಕಿಸ್ತಾನದ ಮಾಜಿ ಸಚಿವ ಫವಾದ್ ಚೌಧರಿ ಪ್ರಶಂಸೆ ವ್ಯಕ್ತಪಡಿಸಿದರು.
ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವ ಕ್ಷಣ ಭಾರತೀಯರಿಗೆ ಮಾತ್ರವಲ್ಲದೆ ಇಡೀ ಮಾನವಕುಲಕ್ಕೆ ಐತಿಹಾಸಿಕ ಕ್ಷಣವಾಗಿದೆ. ಈ ಸಂದರ್ಭದಲ್ಲಿ ಇಸ್ರೋ ವಿಜ್ಞಾನಿಗಳು ಮತ್ತು ಎಲ್ಲಾ ಭಾರತೀಯರನ್ನು ಫವಾದ್ ಅಭಿನಂದಿಸಿದ್ದಾರೆ.
ಅದೇ ರೀತಿ ಚಂದ್ರಯಾನ-೩ ಲ್ಯಾಂಡಿಂಗ್ ಅನ್ನು ಪಾಕಿಸ್ತಾನದಲ್ಲಿ ನೇರ ಪ್ರಸಾರ ಮಾಡುವಂತೆ ಪಾಕಿಸ್ತಾನ ಸರ್ಕಾರವನ್ನು ಒತ್ತಾಯಿಸಿದರು. ಈ ಬಗ್ಗೆ ಫವಾದ್ ಚೌಧರಿ ಮಂಗಳವಾರ ಟ್ವೀಟ್ ಮಾಡಿದ್ದಾರೆ. ಇಮ್ರಾನ್ ಖಾನ್ ಸರ್ಕಾರದಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವರಾಗಿ ಸೇವೆ ಸಲ್ಲಿಸಿದ ಫವಾದ್ ಚೌಧರಿ ಅವರು ಇತ್ತೀಚೆಗೆ ಚಂದ್ರಯಾನ-೩ ಯೋಜನೆಯನ್ನು ಶ್ಲಾಘಿಸಿ ಟ್ವೀಟ್ ಮಾಡಿದ್ದರು. ಈ ಯೋಜನೆಯಲ್ಲಿ ಪ್ರಮುಖ ಕ್ಷಣವಾಗಿರುವ ವಿಕ್ರಮ್ ಲ್ಯಾಂಡಿಂಗ್ ಅನ್ನು ಭಾರತದಲ್ಲಿ ನೇರ ಪ್ರಸಾರ ಮಾಡಲಾಗುತ್ತಿದ್ದು, ಅದನ್ನು ನೇರವಾಗಿ ವೀಕ್ಷಿಸುವ ಅವಕಾಶವನ್ನು ಪಾಕಿಸ್ತಾನದ ಜನತೆಗೂ ನೀಡಬೇಕು ಎಂದು ಫವಾದ್ ಪಾಕ್ ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ.