ವಿಜಯವಾಡ, ಸೆ.೯-ಭ್ರಷ್ಟಾಚಾರ ಮಾಡಿದ ಆರೋಪದ ಮೇಲೆ ತೆಲುಗು ದೇಶಂ ಪಕ್ಷದ (ಟಿಡಿಪಿ) ಅಧ್ಯಕ್ಷ ಹಾಗೂ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರನ್ನು ಸಿಐಡಿ ಪೊಲೀಸರು ಇಂದು ಮುಂಜಾನೆ ಬಂಧಿಸಿದ್ದಾರೆ.ನಂದ್ಯಾಲ ವ್ಯಾಪ್ತಿಯ ಡಿಐಜಿ ರಘುರಾಮಿ ರೆಡ್ಡಿ ನೇತೃತ್ವದಲ್ಲಿ ಪೊಲೀಸರು ಇಂದು ಬೆಳಗಿನ ಜಾವ ೩ ಗಂಟೆ ಸುಮಾರಿಗೆ ಚಂದ್ರಬಾಬು ನಾಯ್ಡು ಅವರಿದ್ದ ನಿವಾಸದ ಮೇಲೆ ದಾಳಿ ಮಾಡಿ ಅವರನ್ನು ಬಂಧಿಸಿದ್ದಾರೆ. ಚಂದ್ರಬಾಬುನಾಯ್ಡು ಅವರನ್ನು ಬಂಧಿಸಿರುವ ಆಂಧ್ರಪ್ರದೇಶ ಸರ್ಕಾರದ ಕ್ರಮಕ್ಕೆ ಆಂಧ್ರಾದ್ಯಂತ ತೆಲುಗುದೇಶಂ ಪಕ್ಷದ ನಾಯಕರು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಆಂಧ್ರ ಪ್ರದೇಶ ಸ್ಕಿಲ್ ಡೆವಲಪ್‌ಮೆಂಟ್ ಕಾರ್ಪೋರೇಷನ್ ಹಗರಣಕ್ಕೆ ಸಂಬಂಧಿಸಿದಂತೆ ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಲಾಗಿದ್ದು, ಈ ಹಗರಣದಲ್ಲಿ ೩೭೧ ಕೋಟಿ ರೂಪಾಯಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು.
ಈ ಹಗರಣದ ಕುರಿತು ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಸಿಐಡಿಗೆ ವಹಿಸಿದ್ದರು. ಈ ಪ್ರಕರಣದಲ್ಲಿ ಚಂದ್ರಬಾಬು ನಾಯ್ಡು ಅವರು ಪ್ರಮುಖ ಆರೋಪಿಯಾಗಿದ್ದು, ಇದೀಗ ಬಂಧಿಸಲಾಗಿದೆ.

ಕಾರ್ಯಕರ್ತರ ಆಕ್ರೋಶ:
ಆಂಧ್ರದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಲು ಶುಕ್ರವಾರ ತಡರಾತ್ರಿ ವಾರೆಂಟ್ ಜೊತೆ ಬಂದ ಅಧಿಕಾರಿಗಳನ್ನು ನಾಯ್ಡು ಬೆಂಬಲಿಗರು ತಡೆದು ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ನಾಯ್ಡು ಬೆಂಬಲಿಗರ ನಡುವೆ ಸಣ್ಣ ಪ್ರಮಾಣ ಘರ್ಷಣೆಯೂ ನಡೆದಿತ್ತು. ಹಾಗಾಗಿ,
ನಾಯ್ಡು ಅವರನ್ನು ರಾತ್ರಿಯೇ ಪೊಲೀಸರು ವಶಕ್ಕೆ ತೆಗೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಮತ್ತೆ ಮುಂಜಾನೆ ೬ ಗಂಟೆಗೆ ನಾಯ್ಡು ಅವರ ನಿವಾಸಕ್ಕೆ ತೆರಳಿದ ಪೊಲೀಸರು ಅವರನ್ನು ವಶಕ್ಕೆ ಪಡೆದರು.ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ತೆಲುಗುದೇಶಂನ ಕೆಲ ಕಾರ್ಯಕರ್ತರನ್ನು ನಾಯಕರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.ಚಂದ್ರಬಾಬುನಾಯ್ಡು ಅವರು ಮುಖ್ಯಮಂತ್ರಿಯಾಗಿದ್ದಾಗ ಕೌಶಲ್ಯಾಭಿವೃದ್ಧಿ ನಿಗಮದಲ್ಲಿ ಹಗರಣ ನಡೆದಿತ್ತು. ಈ ಹಗರಣದಲ್ಲಿ ಚಂದ್ರಬಾಬುನಾಯ್ಡು ಅವರು ಎ೧ ಆರೋಪಿಯಾಗಿದ್ದಾರೆ ಎಂದು ಡಿಐಜಿ ರಘುರಾಮರೆಡ್ಡಿ ತಿಳಿಸಿದ್ದಾರೆ.ನಾಯ್ಡು ಅವರ ವಿರುದ್ಧ ಭ್ರಷ್ಟಾಚಾರ ತಡೆಕಾಯ್ದೆ ೧೯೮೮ರಡಿಯಲ್ಲಿ ಪರಕರಣ ದಾಖಲಿಸಲಾಗಿತ್ತು.
ನಾಯ್ಡು ಪುತ್ರನಿಗೆ ತಡೆ

ಆಂಧ್ರದ ಮಾಜಿ ಮುಖ್ಯಮಂತ್ರಿ ಚಂದ್ರಬಾಬುನಾಯ್ಡು ಅವರನ್ನು ಪೊಲೀಸರು ಬಂಧಿಸಿದ ಬೆನ್ನಲ್ಲೆ ಆಂಧ್ರದ ಮಾಜಿ ಸಚಿವ ಗಂಟಶ್ರೀನಿವಾಸ್ ಅವರನ್ನು ಬಂಧಿಸಲಾಗಿದ್ದು, ವಿಜಯವಾಡಗೆ ತೆರಳಲು ಪ್ರವಾಸದಲ್ಲಿದ್ದ ಚಂದ್ರಬಾಬುನಾಯ್ಡು ಅವರ ಪುತ್ರ ನಾರಾ ಲೋಕೇಶ್ ಕೋನಾಸೀಮಾದಿಂದ ವಿಜಯವಾಡಾಗೆ ತೆರಳುತ್ತಿದ್ದಾಗ ಅವರನ್ನೂ ಪೊಲೀಸರು ತಡೆದಿದ್ದಾರೆ.ಟಿಡಿಪಿ ಮುಖ್ಯಸ್ಥ ಹಾಗೂ ತಮ್ಮ ತಂದೆಯ ಬಂಧನದ ಮಾಹಿತಿ ಗೊತ್ತಾಗುತ್ತಿದ್ದಂತೆಯೇ ನಾರಾಲೋಕೇಶ್ ಅವರು ಪ್ರತಿಭಟನೆ ನಡೆಸಿ ಕೋನಾಸೀಮಾ ಜಿಲ್ಲೆಯ ರಾಜೋಲು ತಾಲ್ಲೂಕಿನಿಂದ ವಿಜಯವಾಡಾಗೆ ತೆರಳಲು ಮುಂದಾದಾಗ ಪೊಲೀಸರು ಅವರನ್ನು ತಡೆದರು. ಇದರಿಂದ ಸಿಟ್ಟಿಗೆದ್ದ ನಾರಾಲೋಕೇಶ್ ಪೊಲೀಸರ ಜತೆ ವಾಗ್ವಾದ ನಡೆಸಿ ನೋಟೀಸ್ ನೀಡದೆ ನನ್ನನ್ನು ತಡೆಯುವುದು ಸರಿಯಲ್ಲ ಎಂದು ಹೇಳಿ ಸ್ಥಳದಲ್ಲಿ ಪ್ರತಿಭಟನೆಯನ್ನು ನಡೆಸಿದ್ದು, ಪರಿಸ್ಥಿತಿ ಬಿಗುವಿನಿಂದ ಕೂಡಿದೆ.
ನಾರಾಲೋಕೇಶ್ ಅವರ ಪ್ರತಿಭಟನಾ ಸ್ಥಳಕ್ಕೆ ಮಾಧ್ಯಮದವರನ್ನು ನಿರ್ಬಂಧಿಸಲಾಗಿದೆ.
ಏನಿದು ಹಗರಣ?
೨೦೧೫ರಲ್ಲಿ ಚಂದ್ರಬಾಬು ನಾಯ್ಡು ಸಿಎಂ ಆಗಿದ್ದಾಗ ಕೌಶಲಾಭಿವೃದ್ಧಿಗಾಗಿ ಸರ್ಕಾರ ಸೀಮೆನ್ಸ್ ಮತ್ತು ಡಿಸೈನ್ ಟೆಕ್ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಆಗ ಅವರ ವಿರುದ್ಧ ೩೭೧ ಕೋಟಿ ರೂ. ಹಣ ದುರುಪಯೋಗದ ಪಡಿಸಿಕೊಂಡ ಆರೋಪದ ಕೇಳಿ ಬಂದಿತ್ತು.
ಹೀಗಾಗಿ ೨೦೨೦ರ ಆಗಸ್ಟ್‌ನಲ್ಲಿ ವೈಸಿಪಿ ಸರ್ಕಾರ ಆರೋಪಗಳ ಕುರಿತು ತನಿಖೆಗೆ ಆದೇಶಿಸಿತ್ತು. ೨೦೨೦ರ ಡಿ. ೧೦ರಂದು ವಿಜಿಲೆನ್ಸ್, ೨೦೨೧ ಫೆಬ್ರವರಿಯಲ್ಲಿ ಎಸಿಬಿ ತನಿಖೆ, ಡಿಸೆಂಬರ್‌ನಲ್ಲಿ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಿತ್ತು.
ಬಂಧನಕ್ಕೆ ನಾಯ್ಡು ಆಕ್ರೋಶ..!
ಪೊಲೀಸರ ಬಳಿ ಯಾವುದೇ ಸಾಕ್ಷ್ಯಗಳಿಲ್ಲ ಎಂದು ನಾಯ್ಡು ಆರೋಪಿಸಿದ್ದಾರೆ. ನನ್ನ ಹೆಸರು ಎಲ್ಲಿದೆ ಎಂದು ನನಗೆ ತೋರಿಸಿ. ಮೂಲಭೂತ ಸಾಕ್ಷ್ಯಗಳಿಲ್ಲದೆ ಅವರು ನನ್ನನ್ನು ಹೇಗೆ ಬಂಧಿಸುತ್ತಾರೆ?” ಎಂದು ಅವರು ಪ್ರಶ್ನಿಸಿದ್ದಾರೆ.
ನಾನು ಯಾವುದೇ ಅವ್ಯವಹಾರ ಅಥವಾ ಭ್ರಷ್ಟಾಚಾರ ಮಾಡಿಲ್ಲ. ಯಾವುದೇ ಸರಿಯಾದ ಮಾಹಿತಿಯಿಲ್ಲದೆ ಸಿಐಡಿ ನನ್ನನ್ನು ಬಂಧಿಸಿದೆ. ಸಾಕ್ಷ್ಯವನ್ನು ತೋರಿಸಲು ನಾನು ಅವರನ್ನು ಕೇಳಿದೆ ಆದರೆ ಅವರು ತೋರಿಸಲು ನಿರಾಕರಿಸಿದರು. ನನ್ನ ಪಾತ್ರವಿಲ್ಲದ ಪ್ರಕರಣದಲ್ಲಿ ಎಫ್‌ಐಆರ್‌ನಲ್ಲಿ ನನ್ನ ಹೆಸರನ್ನು ಲಗತ್ತಿಸಿದ್ದಾರೆ ಎಂದು ನಾಯ್ಡು ಕಿಡಿಕಾರಿದ್ದಾರೆ.