ಚಂದ್ರಬಾಬುಗೆ ೧೪ ದಿನ ನ್ಯಾಯಾಂಗ ಬಂಧನಕ್ಕೆ

ವಿಜಯವಾಡ,ಸೆ.೧೧- ಆಂಧ್ರಪ್ರದೇಶದ ಬಹುಕೋಟಿ ಕೌಶಲ್ಯ ಅಭಿವೃದ್ಧಿ ನಿಗಮದಲ್ಲಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಡಿಪಿ ಮುಖ್ಯಸ್ಥ ಹಾಗೂ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಎಸಿಬಿ ನ್ಯಾಯಾಲಯ ೧೪ ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಜೈಲಿನಲ್ಲಿರುವ ಸಮಯದಲ್ಲಿ ಮನೆಯಿಂದ ತಯಾರಿಸಿದ ಆಹಾರ, ಔಷಧಿ ಹಾಗು ವಿಶೇಷ ಕೊಠಡಿ ವ್ಯವಸ್ಥೆ ಮಾಡುವಂತೆ ರಾಜಮಹೇಂದ್ರವರಂ ಕೇಂದ್ರ ಕಾರಾಗೃಹದ ಅಧೀಕ್ಷಕರಿಗೆ ನಿರ್ದೇಶನ ನೀಡಿದೆ.
೭೩ರ ಹರೆಯದ ಚಂದ್ರಬಾಬು ನಾಯ್ಡು ಅವರಿಗೆ ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಅವರನ್ನು ಪ್ರತ್ಯೇಕವಾಗಿ ಇರಿಸುವಂತೆ ನ್ಯಾಯಾಲಯ ಸೂಚಿಸಿದೆ. ಅಲ್ಲದೆ ಝಡ್ ಪ್ಲಸ್ ಭದ್ರತೆ ಹೊಂದಿರುವ ಹಿನ್ನೆಲೆಯಲ್ಲಿ ಅಗತ್ಯ ಕ್ರಮಕೈಗೊಳ್ಳುವಂತೆ ನ್ಯಾಯಾಲಯ ಸೂಚಿಸಿದೆ.
ಚಂದ್ರಬಾಬು ನಾಯ್ಡು ವಿರುದ್ದ ಮಾಡಲಾದ ಆರೋಪಗಳಲ್ಲಿ ನಂಬಲು ಆಧಾರಗಳಿವೆ ಮತ್ತು ತನಿಖೆಯನ್ನು ಪೂರ್ಣಗೊಳಿಸಲು ೨೪ ಗಂಟೆಗಳ ಸಾಕಾಗುವುದಿಲ್ಲ ಎಂದು ಹೇಳಿ ೧೪ ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
“ನಾಯ್ಡು ಅವರನ್ನು ಸೆಪ್ಟೆಂಬರ್ ೨೨, ರಂದು ಬೆಳಿಗ್ಗೆ ೧೦.೩೦ ಕ್ಕೆ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಎಂದು ಜೈಲಿನ ಸೂಪರಿಂಟೆಂಡೆಂಟ್ ಅವರಿಗೆ ನ್ಯಾಯಾಧೀಶರು ಆದೇಶಿಸಿದ್ದಾರೆ.
ಬಿಗಿ ಭದ್ರತೆ ಮತ್ತು ಪ್ರತಿಕೂಲ ಹವಾಮಾನದ ನಡುವೆ, ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಭು ನಾಯ್ಡು ಅವರನ್ನು ವಿಜಯವಾಡದಿಂದ ರಾಜಮಹೇಂದ್ರವರಂಗೆ ಸುಮಾರು ೨೦೦ ಕಿಮೀ ದೂರದ ರಸ್ತೆಯಲ್ಲಿ ಬೆಂಗಾವಲು ಪಡೆಗೆ ಕಳುಹಿಸಲಾಯಿತು.
ನಾರಾ ಆಕ್ರೋಶ:
ಮಾಡದ ಅಪರಾಧಕ್ಕಾಗಿ ತಮ್ಮ ತಂದೆಯನ್ನು ಅನ್ಯಾಯವಾಗಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಟಿಡಿಪಿ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಆರೋಪಿಸಿದ್ದಾರೆ.
ಟ್ವಿಟ್ಟರ್ ನಲ್ಲಿ ಭಾವನಾತ್ಮಕ ಹೇಳಿಕೆ ನೀಡಿದ ಅವರು ನನ್ನ ರಕ್ತ ಕುದಿಯುತ್ತದೆ, ರಾಜಕೀಯ ದ್ವೇಷದ ಆಳಕ್ಕೆ ಯಾವುದೇ ಮಿತಿಯಿಲ್ಲವೇ. ದೇಶ, ರಾಜ್ಯ ಮತ್ತು ತೆಲುಗು ಜನರಿಗೆ ಇಷ್ಟೆಲ್ಲಾ ಸಾಧನೆ ಮಾಡಿದ ನನ್ನ ತಂದೆಯ ಕ್ಯಾಲಿಬರ್‌ನ ವ್ಯಕ್ತಿ ಅಂತಹ ಅನ್ಯಾಯವನ್ನು ಏಕೆ ಸಹಿಸಿಕೊಳ್ಳಬೇಕು ಎಂದು ಪ್ರಶ್ನಿಸಿದ್ದಾರೆ.

ಪವನ್ ಕಲ್ಯಾಣ ಆರೋಪ
ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರು ರಾಜಕೀಯ ವಿರೋಧಿಗಳನ್ನು ಅಪರಾಧಿಗಳೆಂದು ಗುರುತಿಸಿ ಜೈಲಿಗೆ ಕಳುಹಿಸುತ್ತಿದ್ದಾರೆ ಎಂದು ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ ಆರೋಪಿಸಿದ್ದಾರೆ.
ದಕ್ಷಿಣ ರಾಜ್ಯದಲ್ಲಿ ಬಿಜೆಪಿಯ ಸ್ಥಳೀಯ ಮಿತ್ರನಾಗಿರುವ ನಟ-ರಾಜಕಾರಣಿ ಪವನ್ ಕಲ್ಯಾಣ್ , ಕಾನೂನುಗಳು ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದರೆ ಜಗನ್ ಮೋಹನ್ ರೆಡ್ಡಿ ಮುಖ್ಯಮಂತ್ರಿಯಾಗುತ್ತಿರಲಿಲ್ಲ ಎಂದು ಕಾಲೆಳೆದಿದ್ದಾರೆ
ವಿಜಯವಾಡದ ಎಸಿಬಿ ನ್ಯಾಯಾಲಯ ಬಹುಕೋಟಿ ಕೌಶಲ್ಯ ಅಭಿವೃದ್ಧಿ ನಿಗಮದ ಹಗರಣದಲ್ಲಿ ನಾಯ್ಡು ಅವರ ಪಾತ್ರವನ್ನು ಆರೋಪಿಸಿ ೧೪ ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಕಣ್ಣೀರಿಟ್ಟ ಪತ್ನಿ
ಹಣ ದುರುಪಯೋಗ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾದ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ತೆಲುಗು ದೇಶಂ ಪಕ್ಷದ ಅಧ್ಯಕ್ಷ ನಾರಾ ಚಂದ್ರಬಾಬು ನಾಯ್ಡು ತಮ್ಮ ವಿವಾಹವಾದ ದಿನದಂದೇ ಚಂದ್ರಬಾಬು ವಿಚಾರಣಾಧೀನ ಕೈದಿಯಾಗಿ ಜೈಲಿಗೆ ಹೋಗಬೇಕಾಯಿತು ಎಂಬ ವಿಷಯದ ಕುರಿತು ಎಲ್ಲೆಡೆ ಚರ್ಚೆಯಾಗುತ್ತಿದೆ.
ನಿನ್ನೆ ಚಂದ್ರಬಾಬು ಮತ್ತು ಭುವನೇಶ್ವರಿ ಅವರ ೪೨ನೇ ವಿವಾಹ ವಾರ್ಷಿಕೋತ್ಸವ ಅದೇ ದಿನ ಎಸಿಬಿ ನ್ಯಾಯಾಲಯ ಅವರಿಗೆ ನ್ಯಾಯಾಂಗ ಬಂಧನದ ತೀರ್ಪು ನೀಡಿತ್ತು. ತೀರ್ಪಿನ ನಂತರ ಚಂದ್ರಬಾಬು ಪತ್ನಿ ಭುವನೇಶ್ವರಿ, ಲೋಕೇಶ್, ಬ್ರಹ್ಮಣಿ, ನಂದಮೂರಿ ರಾಮಕೃಷ್ಣ ಸೇರಿದಂತೆ ಕುಟುಂಬದ ಸದಸ್ಯರು ನ್ಯಾಯಾಲಯದಲ್ಲಿ ಚಂದ್ರಬಾಬು ಅವರನ್ನು ಭೇಟಿ ಮಾಡಿದರು. ಆ ವೇಳೆ ಭುವನೇಶ್ವರಿ ಕಣ್ಣೀರಿಟ್ಟರು.