ಚಂದ್ರಬಂಡಾ ಗ್ರಾ.ಪಂ: ಮುಂಜಾನೆ ಬಿಜೆಪಿ-ಮಧ್ಯಾಹ್ನ ಕಾಂಗ್ರೆಸ್ ಸೇರ್‍ಪಡೆ

ರಾಯಚೂರು ಜು ೩೧:- ಗ್ರಾ.ಪಂಅಧ್ಯಕ್ಷ- ಉಪಾಧ್ಯಕ್ಷರು ಸೇರಿ ಎಲ್ಲ ಸದಸ್ಯರನ್ನು ಪಕ್ಷಕ್ಕೆ ಸೆಳೆಯುವ ಮೂಲಕ ಕಾಂಗ್ರೆಸ್ ಪಕ್ಷ ಗ್ರಾಮೀಣ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಅಸ್ಥಿತ್ವವೆ ಅಲುಗಾಡುವಂತೆ ಮಾಡಿದೆ.
ಬಿಜೆಪಿ ಹಿಡಿತದಲ್ಲಿರುವ ಚಂದ್ರಬಂಡಾ ಗ್ರಾ.ಪಂ ನೂತನ ಅಧ್ಯಕ್ಷ ಮಾಣಿಕ್ಯಪ್ಪ ಮತ್ತು ಉಪಾಧ್ಯಕ್ಷರು ಹಾಗೂ ಬಹುತೇಕ ಸದಸ್ಯರು ನಿನ್ನೆ ಅಧ್ಯಕ್ಷ ಚುನಾವಣೆಯ ಕೇವಲ ಮೂರು ಗಂಟೆಯಲ್ಲಿ ಕಾಂಗ್ರೆಸ್ ಪಕ್ಷ ಸೇರುವ ಮೂಲಕ ಚುನಾವಣೆ ಮುಂಚೆ ಬಿಜೆಪಿಗೆ ಶ್ಯಾಕ್ ನೀಡಿದ್ದಾರೆ.
ಈ ಹಿಂದೆ ಚಂದ್ರಬಂಡಾ ಗ್ರಾ.ಪಂ. ಬಿಜೆಪಿ ಹಿಡಿತದಲ್ಲಿ ಇತ್ತು. ಕಳೆದ ಕೆಲ ದಿನಗಳ ಹಿಂದೆ ಅಧ್ಯಕ್ಷ ಮಹೇಶ್ ವಿರುದ್ಧ ಬಿಜೆಪಿ ಬೆಂಬಲಿತ ಸದಸ್ಯರು ಅವಿಶ್ವಾಸ ಮಂಡಿಸಿ ಪದಚ್ಯುತಿಗೊಳಿಸಿದ್ದರು.ಖಾಲಿ ಇದ್ದ ಅಧ್ಯಕ್ಷ ಸ್ಥಾನಕ್ಕೆ ನಿನ್ನೆ ಚುನಾವಣೆ ನಡೆಸಲಾಯಿತು. ಮಾಣಿಕ್ಯಪ್ಪ ಅವರನ್ನು ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದರು. ಬಿಜೆಪಿ ನಾಯಕರು, ಚಂದ್ರಬಂಡಾದಲ್ಲಿ ಬಿಜೆಪಿ ಅಧ್ಯಕ್ಷರ ಜಯ. ಮತ್ತೊಮ್ಮೆ ಗ್ರಾ.ಪಂ ಬಿಜೆಪಿ ಕೈ ವಶ ಎಂದು ಹೇಳಿಕೊಂಡ ಕೆಲವೆ ಸಮಯದಲ್ಲಿ ಎಲ್ಲಾ ಉಲ್ಟಾ ಪಲ್ಟಾ ಆಗಿದೆ.
ಚುನಾವಣೆ ನಂತರ ಕೇಸರಿ ಪೇಟಾ ಮತ್ತು ಕೇಸರಿ ಶ್ಯಾಲ್ ಹಾಕಿ ಸನ್ಮಾನದ ನಂತರ ನೇರವಾಗಿ ನಗರಕ್ಕೆ ಬಂದ ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಾಗೂ ಸದಸ್ಯರು ಗ್ರಾಮೀಣ ಶಾಸಕರಾದ ದದ್ದಲ ಬಸವನಗೌಡ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸೇರುವ ಮೂಲಕ ಬಿಜೆಪಿ ಮಾಜಿ ಶಾಸಕ ತಿಪ್ಪರಾe ಮತ್ತು ಬಿಜೆಪಿ ಮುಖಂಡರು ಅಚ್ಚರಿಗೆ ಗುರಿಯಾಗುವಂತೆ ಮಾಡಿದೆ.ಈ ಘಟನೆಯ ಬೆನ್ನ ಹಿಂದೆಯೆ ಬಿಜೆಪಿಯ ಅಸಮಾಧಾನ ಬಣ ಸಾಮಾಜಿಕ ಜಾಲ ತಾಣದಲ್ಲಿ ಮುಂಜಾನೆ ಬಿಜೆಪಿ ಮಧ್ಯಾಹ್ನ ಕಾಂಗ್ರೆಸ್ ಸೇರ್‍ಪಡೆ ಎಂದು ಟ್ರೋಲ್ ಮಾಡಿ ಮಹೇಶ್ ವಿರುದ್ಧ ಅವಿಶ್ವಾಸ ಮಾಡದ ನಾಯಕರಿಗೆ ಮತ್ತು ಮಾಜಿ ಶಾಸಕರ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ.