ಚಂದ್ರನ ಮೊದಲ ನೋಟ ಸೆರೆ ಹಿಡಿದ ಚಂದ್ರಯಾನ 3

ಬೆಂಗಳೂರು.ಆ೭:ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ೩ ನೌಕೆ ಚಂದ್ರನ ಮೊದಲ ನೋಟವನ್ನು ಸೆರೆಹಿಡಿದಿದೆ. ಅಲ್ಲಿಂದ ಅದ್ಭುತವಾದ ದೃಶ್ಯವನ್ನು ಭೂಮಿಗೆ ಕಳುಹಿಸಿದೆ. ಇದರ ವಿಡಿಯೋವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇಂದು ಬಿಡುಗಡೆ ಮಾಡಿದೆ.
ಜುಲೈ ೧೪ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ – ೩ ಉಡಾವಣೆಯಾಗಿದೆ. ಈ ಗಗನ ನೌಕೆ ಆಗಸ್ಟ್ ೫ರ ಶನಿವಾರ ಸಂಜೆ ಚಂದ್ರನ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿತ್ತು. ಅದೇ ದಿನ ಚಂದ್ರನ ದೃಶ್ಯವನ್ನು ಸೆರೆಹಿಡಿದಿದೆ. ದಿ ಮೂನ್ ಆಗಸ್ಟ್ ೫ರಂದು ಚಂದ್ರನ ಕಕ್ಷೆ ಸೇರುವ ಸಮಯದಲ್ಲಿಚಂದ್ರಯಾನ೩ ಬಾಹ್ಯಾಕಾಶ ನೌಕೆ ಕಂಡಂತೆ ಎಂದು ಇಸ್ರೋ ಟ್ವೀಟ್ ಮಾಡಿದೆ.
ಶನಿವಾರ ಸಂಜೆ ೭ ಗಂಟೆಗೆ ಚಂದ್ರನ ಕಕ್ಷೆಗೆ ಸೇರಿಸುವ ಮೂಲಕ ಭಾರತ ಗಗನನೌಕೆಯು ಚಂದ್ರನೆಡೆಗಿನ ಪ್ರಯಾಣದಲ್ಲಿ ಮಹತ್ತರ ಘಟ್ಟ ಸಾಧಿಸಿತ್ತು. ಪ್ರಸ್ತುತ ಚಂದ್ರಯಾನ -೩ರ ಪ್ರಯಾಣದ ಅಂತಿಮ ಹಂತದಲ್ಲಿದೆ. ಆಗಸ್ಟ್ ೨೩ರಂದು ಚಂದ್ರನ ಮೇಲ್ಮೈಯಲ್ಲಿ ಲ್ಯಾಂಡರ್ ಮತ್ತು ರೋವರ್ ಮೃದು ಲ್ಯಾಂಡಿಂಗ್ ಆಗಲಿದೆ ಎಂದು ಇಸ್ರೋ ತಿಳಿಸಿದೆ. ಮೃದು ಲ್ಯಾಂಡಿಂಗ್ ಯಶಸ್ವಿಯಾದರೆ ಬಾಹ್ಯಾಕಾಶ ಕ್ಷೇತ್ರದಲ್ಲೇ ಭಾರತ ಅತಿದೊಡ್ಡ ಮೈಲಿಗಲ್ಲು ಸಾಧಿಸಲಿದೆ.