ಚಂದ್ರನ ಮೇಲೆ ೧೭ ಸೆಲ್ಸಿಯಸ್ ತಾಪಮಾನ

ವಾಷಿಂಗ್ಟನ್, ಆ.೧-ಬಾಹ್ಯಾಕಾಶ ವಿಜ್ಞಾನಿಗಳು ಚಂದ್ರನ ಮೇಲಿನ ಹೊಂಡಗಳೊಳಗೆ ಇರುವ ಮಬ್ಬಾದ ಸ್ಥಳಗಳನ್ನು ಕಂಡುಹಿಡಿದಿದ್ದು, ಸುಮಾರು ೧೭ ಸೆಲ್ಸಿಯಸ್ ತಾಪಮಾನ ಇರುವ ಮಾಹಿತಿ ಗೊತ್ತಾಗಿದೆ.

ಮತ್ತೊಂದೆಡೆ ನಾಸಾದ ಲೂನಾರ್ ರೆಕನೈಸೆನ್ಸ್ ಆರ್ಬಿಟರ್ (ಎಲ್‌ಆರ್‌ಒ) ಬಾಹ್ಯಾಕಾಶ ನೌಕೆ ಮತ್ತು ಕಂಪ್ಯೂಟರ್ ಮಾಡೆಲಿಂಗ್‌ನಿಂದ ಸಂಗ್ರಹಿಸಲಾದ ದತ್ತಾಂಶವನ್ನು ವಿಶ್ಲೇಷಿಸಿರುವ ವಿಜ್ಞಾನಿಗಳು, ಮಾನವ ಜೀವಿಸಲು ಸೂಕ್ತವಾದ ಪರಿಸರವೂ ಹೌದು ಎಂದಿದ್ದಾರೆ.

ಚಂದ್ರನ ಮೇಲ್ಮೈ ಮೇಲಿನ ಪ್ರದೇಶಗಳಿಗೆ ಹೋಲಿಸಿದರೆ ಅಲ್ಲಿನ ಕುಳಿಗಳು ಮತ್ತು ಗುಹೆಗಳು ಚಂದ್ರನ ಪರಿಶೋಧನೆಗೆ ಸೂಕ್ತವಾದ ಸ್ಥಳಗಳಾಗಿವೆ. ಇನ್ನೂ ವಿಶೇಷ ಎಂದರೆ ಇಲ್ಲಿ ಹಗಲಿನಲ್ಲಿ ಸುಮಾರು ೧೨೭ ಸೆಲ್ಸಿಯಸ್‌ಗೆ ತಾಪಮಾನ ಇದ್ದರೆ ರಾತ್ರಿಯಲ್ಲಿ ಮೈನಸ್ -೧೭೩ ಸೆಲ್ಸಿಯಸ್‌ಗೆ ಇಳಿಕೆ ಕಾಣುತ್ತದೆ. ಚಂದ್ರನ ಅಧ್ಯಯನವು ಮುಂದಿನ ಬಾಹ್ಯಾಕಾಶ ಸಂಶೋಧನೆಗೆ ಹಾಗೂ ಅಲ್ಲಿ ಮಾನವ ಜೀವಿಗಳ ಬದುಕಿಗೆ ಏನಾದರೂ ನೆಲೆ ಸಿಗಬಹುದಾ ಎಂಬ ಬಗ್ಗೆ ಅಧ್ಯಯನಕ್ಕೆ ಇದು ದಾರಿ ಮಾಡಿಕೊಡುವ ಉದ್ದೇಶವನ್ನು ನಾಸಾ ಹೊಂದಿದೆ.

೨೦೦೯ ರಲ್ಲಿ ಮೊದಲ ಬಾರಿಗೆ ಚಂದ್ರನ ಮೇಲೆ ಇರುವ ಹೊಂಡದಂತ ಆಕೃತಿಗಳನ್ನ ಪತ್ತೆ ಹಚ್ಚಲಾಯಿತು. ಮತ್ತು ಅಂದಿನಿಂದ ನಾಸಾ ವಿಜ್ಞಾನಿಗಳು ಅಲ್ಲಿನ ಕುಳಿಗಳ ಬಗ್ಗೆ ಅನ್ವೇಷಿಸಲು ಶುರು ಮಾಡಿದ್ದರು. ಇವುಗಳಲ್ಲಿ ಜೀವಿಗಳ ಇರುವ ಬಗ್ಗೆ ಅಧ್ಯಯನ ಮಾಡಲು ಯೋಗ್ಯ ಎಂದು ಯೋಚಿಸಿದ್ದರು. ಚಂದ್ರನ ಮೇಲಿರುವ ಈ ಹೊಂಡಗಳು ಅಥವಾ ಗುಹೆಗಳು ಕಾಸ್ಮಿಕ್ ಕಿರಣಗಳು, ಸೌರ ವಿಕಿರಣ ಮತ್ತು ಸೂಕ್ಷ್ಮ ಉಲ್ಕೆಗಳಿಂದ ಸ್ವಲ್ಪ ರಕ್ಷಣೆ ನೀಡುತ್ತವೆ ಎಂಬುದನ್ನು ನಾಸಾ ವಿಜ್ಞಾನಿಗಳು ಕಂಡುಕೊಂಡಿದ್ದಾರೆ.