ಚಂದ್ರನ ಅಂಗಳಕ್ಕೆ ಭಾರತ ಹೆಜ್ಜೆ ಜಗತ್ತಿನ ಚಿತ್ತ ಭಾರತದತ್ತ

ಬೆಂಗಳೂರು, ಆ.೨೨- ಚಂದ್ರಯಾನ-೩ರ ಲ್ಯಾಂಡರ್ ಮಾಡ್ಯೂಲ್ ಬುಧವಾರ ಸಂಜೆ ಸುಮಾರು ೬:೦೪ರ ವೇಳೆಗೆ ಚಂದ್ರನ ಮೇಲ್ಭಾಗಕ್ಕೆ ಸ್ಪರ್ಶಿಸಲಿದ್ದು, ಜಾಗತಿಕ ಮಟ್ಟದಲ್ಲಿ ಕೌತುಕಕ್ಕೆ ಕಾರಣವಾಗಿದೆ. ಒಂದು ವೇಳೆ ಸಾಫ್ಟ್ ಲ್ಯಾಂಡಿಂಗ್ ಆದರೆ ಚಂದ್ರನ ಮೇಲ್ಭಾಗಕ್ಕೆ ಸ್ಪರ್ಶಿಸಿದ ಜಗತ್ತಿನ ೪ನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಲಿದೆ. ನಿನ್ನೆ ಈಗಾಗಲೇ ಚಂದ್ರನ ಚಿತ್ರಗಳನ್ನು ಗಗನನೌಕೆ ಸೆರೆಹಿಡಿದು ಭೂಮಿಗೆ ರವಾನಿಸಿದೆ. ಸದ್ಯ ಸಾಫ್ಟ್ ಲ್ಯಾಂಡಿಂಗ್ ಇನ್ನೇನು ಕ್ಷಣಗಣನೆ ಆರಂಭವಾಗಿದ್ದು, ಈ ನಡುವೆ ಯಾವುದೇ ಅಂಶಗಳು ಪ್ರತಿಕೂಲವೆಂದು ತೋರಿದರೆ ಮಾಡ್ಯೂಲ್‌ನ ಲ್ಯಾಂಡಿಂಗ್ ಅನ್ನು ಆಗಸ್ಟ್ ೨೭ ಕ್ಕೆ ಮುಂದೂಡಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಇನ್ನು ಚಂದ್ರನ ಮೇಲ್ಬಾಗ ತಲುಪಿದ ಬಳಿಕ ಲ್ಯಾಂಡರ್ ಹಾಗೂ ರೋವರ್ ಏನು ಮಾಡಲಿದೆ ಎಂಬ ಬಗ್ಗೆ ಕುತೂಹಲ ಸಾಮಾನ್ಯ ಜನರಲ್ಲಿ ಮನೆ ಮಾಡಿದೆ. ಇದಕ್ಕೂ ಮುನ್ನ ನಾಳೆ ಸಾಫ್ಟ್ ಲ್ಯಾಂಡಿಂಗ್ ಮಾಡಲು ಪ್ರತಿಕೂಲ ವಾತಾವರಣ ಲಭಿಸದೇ ಹೋದರೆ ಆಗಸ್ಟ್ ೨೭ಕ್ಕೆ ಯೋಜನೆ ಮುಂದೂಡಲಾಗುವ ಸಾಧ್ಯತೆ ಕೂಡ ಇದೆ ಎಂದು ಇಸ್ರೋ ವಿಜ್ಞಾನಿಯೊಬ್ಬರು ತಿಳಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಚಂದ್ರನ ದಕ್ಷಿಣ ಧ್ರುವ ಪ್ರದೇಶವನ್ನು ಗುರಿಯಾಗಿರಿಸಿಕೊಂಡು ಇಸ್ರೋದ ಚಂದ್ರಯಾನ-೩ ಯೋಜನೆ ನಡೆಸಿದೆ. ಜಗತ್ತಿನಲ್ಲೇ ಈತನಕ ದಕ್ಷಿಣ ಧ್ರುವ ಪ್ರದೇಶಕ್ಕೆ ಯಾವುದೇ ರಾಷ್ಟ್ರಗಳು ತಲುಪಲು ಸಾಧ್ಯವಾಗಿಲ್ಲ. ಹಾಗಾಗಿ ಕೌತುಕವಾಗಿಯೇ ಉಳಿದಿರುವ ಇಲ್ಲಿನ ಪ್ರದೇಶದಲ್ಲಿ ಚಂದ್ರಯಾನ-೩ ಲ್ಯಾಂಡರ್ ಮಂಜುಗಡ್ಡೆ ಅಥವಾ ಹೆಪ್ಪುಗಟ್ಟಿದ ಸ್ಥಿತಿಯಲ್ಲಿರುವ ನೀರಿನ ಪ್ರದೇಶ ಹೊಂದಿರುವ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಲಿದೆ. ಇದು ಭವಿಷ್ಯದ ಚಂದ್ರನ ಕಾರ್ಯಾಚರಣೆಗಳಿಗೆ ಆಮ್ಲಜನಕ, ಇಂಧನ ಮತ್ತು ನೀರಿನ ಮೂಲವಾಗಿರಬಹುದು ಅಥವಾ ಹೆಚ್ಚು ಶಾಶ್ವತ ಚಂದ್ರನ ವಸಾಹತು ಆಗಿರಬಹುದು ಎನ್ನಲಾಗಿದೆ. ಇನ್ನು ರೋವರ್ ಚಂದ್ರನ ನೆಲಕ್ಕೆ ಕಾಲಿರಿಸಿದ ಬಳಿಕ ಇಸ್ರೋ ವಿಜ್ಞಾನಿಗಳ ನಿಜವಾದ ಕಾರ್ಯ ಆರಂಭವಾಗುತ್ತದೆ. ಚಂದ್ರನ ಮೇಲೆ ಒಂದು ಲೂನಾರ್ ಡೇ ಅಂದರೆ ಭೂಮಿಯ ೧೪ ದಿನಗಳ ಕಾಲ ರೋವರ್ ಇಲ್ಲಿ ಕಾರ್ಯಾಚರಣೆ ಅಧ್ಯಯನ ನಡೆಸಿ, ಬೆಂಗಳೂರಿನಲ್ಲಿರುವ ಕಮಾಂಡ್ ಸೆಂಟರ್‌ಗೆ ಮಾಹಿತಿ ರವಾನಿಸಲಿದೆ. ಹಾಗಾಗಿ ಲ್ಯಾಂಡಿಂಗ್ ಮತ್ತು ರೋವರ್‌ನಲ್ಲಿರುವ ಐದು ವೈಜ್ಞಾನಿಕ ಉಪಕರಣಗಳಿಂದ ಬರುವ ಟನ್‌ಗಳಷ್ಟು ಡೇಟಾವನ್ನು ವಿಜ್ಞಾನಿಗಳು ವಿಶ್ಲೇಷಿಸಬೇಕಾಗುತ್ತದೆ. ಚಂದ್ರನ ಮೇಲ್ಮೈಯ ಖನಿಜ ಸಂಯೋಜನೆಯ ಸ್ಪೆಕ್ಟ್ರೋಮೀಟರ್ ವಿಶ್ಲೇಷಣೆ ಸೇರಿದಂತೆ ಸರಣಿ ಪ್ರಯೋಗಗಳು ನಡೆಯಲಿದೆ. ಚಂದ್ರನ ಮೇಲ್ಬಾಗಕ್ಕೆ ತಲುಪಿದ ಬಳಿಕ ಸ್ವಲ್ಪ ಸಮಯದ ನಂತರ ವಿಕ್ರಮ್ ಲ್ಯಾಂಡರ್‌ನ ಒಂದು ಬದಿಯ ಫಲಕವು ತೆರೆದುಕೊಳ್ಳುತ್ತದೆ. ಇದು ಪ್ರಗ್ಯಾನ್ ರೋವರ್‌ಗಾಗಿ ರಾಂಪ್ ಅನ್ನು ರಚಿಸುತ್ತದೆ. ರಾಷ್ಟ್ರಧ್ವಜ ಮತ್ತು ಇಸ್ರೋ ಲಾಂಛನವನ್ನು ಹೊಂದಿರುವ ಆರು ಚಕ್ರಗಳ ಪ್ರಗ್ಯಾನ್ ನಾಲ್ಕು ಗಂಟೆಗಳ ನಂತರ ಚಂದ್ರನ ಮೇಲ್ಮೈಯಲ್ಲಿ ಇಳಿದು ಸೆಕೆಂಡಿಗೆ ೧ ಸೆಂ.ಮೀ ವೇಗದಲ್ಲಿ ಚಲಿಸಲಿದೆ.