ರಾಯಚೂರು,ಅ.೨೮- ರಾಹುಗ್ರಸ್ತ ಚಂದ್ರಗ್ರಹಣ ಹಿನ್ನೆಲೆ ಮಂತ್ರಾಲಯದ ರಾಯರ ವೃಂದಾವನಕ್ಕೆ ಗ್ರಹಣದ ಆರಂಭದಿಂದ ಮುಕ್ತಾಯದವರೆಗೂ ನಿರಂತರ ಜಲಾಭಿಷೇಕ ನಡೆಯಲಿದೆ. ಅಲ್ಲದೇ ಶಾಂತಿ ಹೋಮ ಕೂಡ ನಡೆಯಲಿದೆ.
ಗ್ರಹಣ ಇರುವುದರಿಂದ ಭಕ್ತರ ಸೇವೆಗೆ ಒಂದಷ್ಟು ಸಣ್ಣ ಬದಲಾವಣೆಗಳನ್ನು ಮಾಡಲಾಗಿದೆ. ಎಂದಿನಂತೆ ರಾಯರ ವೃಂದಾವನ ದರ್ಶನಕ್ಕೆ ರಾತ್ರಿವರೆಗೂ ಅವಕಾಶ ಇರಲಿದೆ. ಸಂಜೆ ೪ ಗಂಟೆಯ ಬಳಿಕ ಪೂಜೆ ಹಾಗೂ ಸೇವೆಗಳನ್ನ ಬಂದ್ ಮಾಡಲಾಗುತ್ತಿದೆ.
ರಾತ್ರಿ ವೇಳೆ ನಡೆಯುತ್ತಿದ್ದ ಉತ್ಸವಗಳು, ಹರಕೆ ಸೇವೆಗಳನ್ನು ಮಧ್ಯಾಹ್ನವೇ ನೆರವೇರಿಸಲಾಗುತ್ತಿದೆ. ಚಿನ್ನದ ರಥ, ಬೆಳ್ಳಿ ರಥ, ಗಜ ವಾಹನೊತ್ಸವಗಳನ್ನು ಮಧ್ಯಾಹ್ನದ ವೇಳೆಗೆ ಮುಕ್ತಾಯಗೊಳಿಸಲಾಗುತ್ತಿದೆ. ಉಳಿದಂತೆ ಭಕ್ತರಿಗೆ ರಾತ್ರಿ ೮:೩೦ರ ವರೆಗೂ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಸಂಜೆ ೪ ಗಂಟೆ ಬಳಿಕ ತೀರ್ಥ ಪ್ರಸಾದ ಸೇವೆ ಇರುವುದಿಲ್ಲ. ಇನ್ನೂ ಗ್ರಹಣ ಕಾಲದಲ್ಲಿ ಶಾಂತಿ ಹೋಮ ಹಮ್ಮಿಕೊಳ್ಳಲಾಗಿದೆ. ಶಾಂತಿ ಹೋಮದಲ್ಲಿ ಭಕ್ತರಿಗೆ ಭಾಗವಹಿಸಲು ಅವಕಾಶ ನೀಡಲಾಗಿದೆ.