ಚಂದ್ರಗ್ರಹಣ ದೇವಾಲಯಗಳು ಬಂದ್

ಚಂದ್ರಗ್ರಹಣ ಪ್ರಯುಕ್ತ ಕಾಡು ಮಲ್ಲೇಶ್ವರ ದೇವಾಲಯ ಬಂದ್ ಮಾಡಲಾಗಿದೆ. ಭಕ್ತರ ಬಾಗಿಲ ಬಳಿ ನಿಂತು ದರ್ಶನ ಪಡೆಯುತ್ತಿರುವುದು.

ಬೆಂಗಳೂರು, ನ. ೮- ಇಂದು ವರ್ಷದ ಕೊನೆಯ ಚಂದ್ರಗ್ರಹಣ ಸಂಭವಿಸುತ್ತಿದೆ.ಈ ಹಿನ್ನೆಲೆಯಲ್ಲಿ ರಾಜ್ಯದ ಬಹುತೇಕ ದೇವಾಲಯಗಳು ಬಂದ್ ಆಗಲಿವೆ.
ಇದು ಭಾರತದ ಅನೇಕ ರಾಜ್ಯಗಳಲ್ಲಿ ಗೋಚರಿಸುತ್ತದೆ. ಚಂದ್ರಗ್ರಹಣವು ಮೊದಲು ಪೂರ್ವ ರಾಜ್ಯಗಳಲ್ಲಿ ಗೋಚರಿಸುತ್ತದೆ. ಅರುಣಾಚಲ ಪ್ರದೇಶದ ಇಟಾನಗರದಿಂದ ಚಂದ್ರಗ್ರಹಣ ಆರಂಭವಾಗಲಿದೆ. ಇದಲ್ಲದೇ ಕೋಲ್ಕತ್ತಾ, ಗುವಾಹಟಿ, ರಾಂಚಿ, ಬೆಂಗಳೂರು, ದೆಹಲಿ, ಇಂದೋರ್, ಮುಂಬೈ ಮೊದಲಾದ ಹಲವು ನಗರಗಳಲ್ಲಿ ಚಂದ್ರಗ್ರಹಣ ಗೋಚರಿಸಲಿದೆ. ಈ ಚಂದ್ರಗ್ರಹಣವು ಭಾರತದಲ್ಲಿ ಗೋಚರಿಸುವುದರಿಂದ, ಧರ್ಮ ಮತ್ತು ಜ್ಯೋತಿಷ್ಯದ ಪ್ರಕಾರ, ಅದರ ಸೂತಕ ಅವಧಿಯೂ ಮಾನ್ಯವಾಗಿರುತ್ತದೆ.ಪ್ರಮುಖವಾಗಿ ಬೆಂಗಳೂರಿನ ಗವಿಗಂಗಾಧರೇಶ್ವರ ದೇವಸ್ಥಾನ, ಕೋಟೆ ವೆಂಕಟೇಶ್ವರ ದೇವಸ್ಥಾನ, ಮಲ್ಲೇಶ್ವರದ ಕಾಡು ಮಲ್ಲಿಕಾರ್ಜುನ ದೇವಸ್ಥಾನ, ಬಸವನಗುಡಿ ದೊಡ್ಡ ಗಣೇಶ, ಬನಶಂಕರಿ ದೇವಸ್ಥಾನ ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಭಕ್ತರಿಗೆ ದರ್ಶನ ಪಡೆಯಲು ಅವಕಾಶವಿದೆ. ಮಧ್ಯಾಹ್ನದ ಬಳಿಕ ದೇಗುಲಗಳು ಮುಚ್ಚಲಿದ್ದು, ಸಂಜೆ ಗ್ರಹಣದ ಬಳಿಕವೇ ಶುದ್ಧಿಕಾರ್ಯ ನಡೆಸಿ ಅನುವು ಮಾಡಿಕೊಡಲಾಗುತ್ತದೆ.
“ಗ್ರಹಣದಿಂದ ಸಾಕಷ್ಟು ತೊಂದರೆ ಆಗಬಹುದು. ಭರಣಿ ನಕ್ಷತ್ರ, ಮೇಷ ರಾಶಿಯವರಿಗೆ ಗ್ರಹಣ ತೊಂದರೆ ಸಾಧ್ಯತೆಯಿದೆ. ಮಧ್ಯಾಹ್ನ ೧೨ ಗಂಟೆಯ ಬಳಿಕ ದೇವಸ್ಥಾನವನ್ನು ಬಂದ್ ಮಾಡಲಾಗುವುದು. ಸಂಜೆ ೭ ಗಂಟೆಯ ಬಳಿಕ ಬಾಗಿಲು ತೆರೆದು ಶುದ್ಧೀಕರಣ ಮಾಡಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು.
ಇಂದು ಚಂದ್ರಗ್ರಹಣ ಸಂಜೆ ಚಂದ್ರೋದಯವಾಗುತ್ತಿದ್ದಂತೆಯೇ ಆರಂಭವಾಗಲಿದೆ. ಭಾರತೀಯ ಕಾಲಮಾನದ ಪ್ರಕಾರ ನವೆಂಬರ್ ೮ ರಂದು ಸಂಜೆ ೫.೨೦ ರಿಂದ ೬.೨೦ ರವರೆಗೆ ಚಂದ್ರಗ್ರಹಣ ಗೋಚರಿಸಲಿದೆ. ಆದರೆ, ಭಾರತೀಯ ಕಾಲಮಾನ ಮಧ್ಯಾಹ್ನ ಸುಮಾರು ೧ ಗಂಟೆಯಿಂದ ವಿಶ್ವದಲ್ಲಿ ಚಂದ್ರಗ್ರಹಣ ಗೋಚರಿಸಲಿದೆ. ಚಂದ್ರಗ್ರಹಣದ ಸೂತಕ ಅವಧಿಯು ೯ ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ. ಆದ್ದರಿಂದ, ಭಾರತದಲ್ಲಿ ಚಂದ್ರಗ್ರಹಣದ ಸೂತಕವು ಬೆಳಿಗ್ಗೆ ೮.೨೦ ರಿಂದ ಪ್ರಾರಂಭವಾಗಿ ಮತ್ತು ಸಂಜೆ ೬.೫೯ ಕ್ಕೆ ಅಂತ್ಯಗೊಳ್ಳಲಿದೆ.ಗ್ರಹಣ ಕಾಲದಲ್ಲಿ ಸೂತಕದ ಅವಧಿಯಲ್ಲಿ ಆಹಾರ ಸೇವನೆ ನಿಷಿದ್ಧ. ಹಾಗಾಗಿ, ಗ್ರಹಣದ ಸೂತಕದ ಅವಧಿ ಆರಂಭವಾಗುವ ಮೊದಲು ಬೆಳಿಗ್ಗೆ ೧೧:೫೦ರವರೆಗೆ ಆಹಾರ ಸೇವಿಸಬಹುದು. ಗ್ರಹಣ ಮೋಕ್ಷ ಮುಗಿದ ನಂತರ ಸ್ನಾನ ಮಾಡಿ, ನಂತರ ಹೊಸದಾಗಿ ಉಪಹಾರವನ್ನು ಸಿದ್ಧಪಡಿಸಿಕೊಂಡು, ದೇವರಿಗೆ ಅರ್ಪಿಸಿ ಬಳಿಕ ಆಹಾರ ಸೇವಿಸಬಹುದು.ನಗರದಲ್ಲಿ ಸಂಜೆ ೫.೫೩ ರಿಂದ ೬.೧೮ ರವರೆಗೆ ಭಾಗಶಃ ಚಂದ್ರ ಗ್ರಹಣ ಗೋಚರಿಸಬಹುದು. ಗ್ರಹಣವನ್ನು ಬರಿಗಣ್ಣಿನಿಂದ ವೀಕ್ಷಿಸಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.